ಶಿರಸಿ ಕೊಪ್ಪದ ಮಾರುತಿ ಓಲೆಕಾರ್ ಹಾಗೂ ಮುರಕಿಕೊಡ್ಲುವಿನ ವಿನಾಯಕ ಮರಾಠೆ ಸೇರಿ ಶ್ರೀಗಂಧದ ಮರ ಕಡಿದಿದ್ದಾರೆ. ಬೊಮ್ಮನಳ್ಳಿ ಬಳಿಯ ಕಾಡಿಗೆ ಹೋಗಿದ್ದ ಅವರಿಬ್ಬರನ್ನು ಅರಣ್ಯಾಧಿಕಾರಿಗಳು ಬೆನ್ನಟ್ಟಿದ್ದು, ಮಾರುತಿ ಓಲೆಕಾರ್ ಅವರು ಶರಣಾಗಿದ್ದಾರೆ. ವಿನಾಯಕ ಮರಾಠೆ ಅವರು ಅದೇ ಕಾಡಿನಲ್ಲಿ ಓಡಿ ತಪ್ಪಿಸಿಕೊಂಡಿದ್ದಾರೆ.
ಶಿರಸಿ ತಾಲೂಕಿನ ಬೊಮ್ಮನಳ್ಳಿ ಗ್ರಾಮದ ಅರಣ್ಯ ಸರ್ವೆ ನಂ 325ರಲ್ಲಿ ಶ್ರೀಗಂಧದ ಮರವಿರುವುದನ್ನು ಶಿರಸಿ ಕೊಪ್ಪ ಬಳಿಯ ಅಡಗದ್ದೆಯ ಮಾರುತಿ ಫಕ್ಕೀರಪ್ಪ ಓಲೆಕಾರ್ ಹಾಗೂ ಮುರಕಿಕೊಡ್ಲುವಿನ ವಿನಾಯಕ ಮರಾಠೆ ಅವರು ನೋಡಿದ್ದರು. ಆ ಮರ ಕಡಿದು ಮಾರಾಟ ಮಾಡುವ ಮೂಲಕ ಹಣಗಳಿಸಲು ಚಿಂತಿಸಿದ್ದರು. ಅದರಂತೆ, ತಮ್ಮ ಯೋಜನೆಯನ್ನು ಅವರು ಅನುಷ್ಠಾನ ಮಾಡಲು ನಿರ್ಧರಿಸಿದ್ದರು. ಆದರೆ, ಮರ ಕಡಿಯುವ ಸದ್ದು ಕೇಳಿ ಅರಣ್ಯಾಧಿಕಾರಿಗಳು ಅಲ್ಲಿ ದಾಳಿ ಮಾಡಿದರು.
ದೂರದಿದಲೇ ಅಧಿಕಾರಿಗಳನ್ನು ನೋಡಿದ ವಿನಾಯಕ ಮರಾಠೆ ಅವರು ಆ ಕಾಡಿನಲ್ಲಿಯೇ ಓಡಿ ತಪ್ಪಿಸಿಕೊಂಡರು. ಮಾರುತಿ ಓಲೆಕಾರ್ ಅವರಿಗೆ ಓಡಲು ಸಾಧ್ಯವಾಗದೇ ಸಿಕ್ಕಿಬಿದ್ದರು. ಮಾರುತಿ ಓಲೆಕಾರ್ ಅವರ ಬಳಿಯಿದ್ದ 20 ಕೆಜಿ ಗಂಧದ ನಾಟಾವನ್ನು ಅರಣ್ಯಾಧಿಕಾರಿಗಳು ಜಪ್ತು ಮಾಡಿದರು. ಸಿಕ್ಕಿಬಿದ್ದ ಆರೋಪಿಯನ್ನು ಕೋರ್ಟಿಗೆ ಒಪ್ಪಿಸಿದರು.