ಭಟ್ಕಳ ಶಿರಾಲಿ ಬಳಿಯ ಕೃಷ್ಣ ಪ್ರಸಾದ ಹೊಟೇಲ್ ಬಳಿ ಸರಾಯಿ ಮಾರಾಟ ನಡೆದಿದೆ. ಹೊಟೇಲ್ ಕೆಲಸ ಮಾಡುವ ಗಜಾನನ ಮಡಿವಾಳ ಅವರೇ ಇಲ್ಲಿ ತೀರ್ಥ ನೀಡುವ ಕೆಲಸ ಶುರು ಮಾಡಿದ್ದಾರೆ.
ಭಟ್ಕಳ ಶಿರಾಲಿ ಚಿತ್ರಾಪುರದ ಬಪ್ಪನಕೊಡ್ಲುವಿನಲ್ಲಿ ಗಜಾನನ ಶಂಕರ ಮಡಿವಾಳ ಅವರು ವಾಸವಾಗಿದ್ದಾರೆ. ಹೊಟೇಲ್ ಕೆಲಸ ಮಾಡಿಕೊಂಡು ಅವರು ಜೀವನ ಕಟ್ಟಿಕೊಂಡಿದ್ದಾರೆ. ಹೊಟೇಲಿಗೆ ಬರುವವರನ್ನು ಆಕರ್ಶಿಸುವುದಕ್ಕಾಗಿ ಅವರು ಅಲ್ಲಿ ಅಕ್ರಮವಾಗಿ ಸರಾಯಿ ವ್ಯಾಪಾರ ಶುರು ಮಾಡಿದ್ದಾರೆ. ಹೊಟೇಲ್ ಮುಂದೆಯೇ ಅವರು ಸರಾಯಿ ಮಾರಾಟ ಮಾಡುತ್ತಿದ್ದು, ಅದಕ್ಕೆ ಅಗತ್ಯ ಪರವಾನಿಗೆಪಡೆದಿಲ್ಲ. ಅಕ್ರಮ ಸರಾಯಿ ಮಾರಾಟ ತಪ್ಪು ಎಂಬ ಅರಿವಿದ್ದರೂ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಸೈ ಭರಮಪ್ಪ ಬೆಳಗಲಿ ಅವರು ಸೆ 4ರಂದು ಆ ಹೊಟೇಲ್ ಬಳಿ ಹೋಗಿದ್ದು, ಆಗಲೂ ಗಜಾನನ ಮಡಿವಾಳ ಅವರು ಸರಾಯಿ ವ್ಯಾಪಾರ ನಿಲ್ಲಿಸಿಲ್ಲ. ಪೊಲೀಸರ ಎದುರೇ ರಾಜಾರೋಷವಾಗಿ ವ್ಯಾಪಾರ ನಡೆದಿದ್ದು, ಇದನ್ನು ನೋಡಿದ ಅಧಿಕಾರಿಗಳು ತಕ್ಷಣ ತಮ್ಮ ತಂಡದೊoದಿಗೆ ದಾಳಿ ಮಾಡಿದ್ದಾರೆ. ಆಗ, ಅಲ್ಲಿ ಸರಾಯಿ ಕುಡಿದು ಬಿಟ್ಟ ಖಾಲಿ ಪ್ಯಾಕೇಟ್ ಹಾಗೂ ಗ್ರಾಹಕರು ನೀಡಿದ 200ರೂ ಹಣ ಸಿಕ್ಕಿದೆ. ಅದನ್ನು ಪೊಲೀಸರು ವಶಕ್ಕೆಪಡೆದು ಕೇಸು ದಾಖಲಿಸಿದ್ದಾರೆ.