ಯುವತಿ ಜೊತೆ ಸುತ್ತಾಡಲು ಗೋಕರ್ಣಕ್ಕೆ ಬಂದಿದ್ದ ಬೆಂಗಳೂರಿನ ಯುವಕನೊಬ್ಬ ಸೆಲ್ಪಿ ಕ್ಲಿಕ್ಕಿಸುವಾಗ ಮೈ ಮರೆತು ಸಮುದ್ರಕ್ಕೆ ಬಿದ್ದಿದ್ದು, ಅಲ್ಲಿದ್ದ ಮೀನುಗಾರರು ಆ ಯುವಕನ ಪ್ರಾಣ ಕಾಪಾಡಿದ್ದಾರೆ. ಅಸ್ವಸ್ಥಗೊಂಡ ಯುವಕನನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾರೆ.
ಪ್ರಶ್ನಿಸಿದರೂ ಹೆಸರು-ವಿಳಾಸ ಬಾಯ್ಬಿಡದ ಯುವಕನೊಬ್ಬ ಶನಿವಾರ ಯುವತಿಯೊಬ್ಬರ ಜೊತೆ ಗೋಕರ್ಣಕ್ಕೆ ಬಂದಿದ್ದು, ಅವರಿಬ್ಬರು ಸೇರಿ ಕಡಲತೀರಕ್ಕೆ ಹೋಗಿದ್ದರು. ಅಲ್ಲಿ ಸಾಕಷ್ಟು ಸಮಯಗಳ ಕಾಲ ಅವರು ವಿವಿಧ ಬಗೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅದಾದ ನಂತರ ಅವರಿಬ್ಬರು ಅಲ್ಲಿದ್ದ ಕಲ್ಬಂಡೆ ಏರಿದರು. ಅಲ್ಲಿ ಒಟ್ಟಿಗೆ ನಿಂತು ಸೆಲ್ಪಿ ಕ್ಲಿಕ್ಕಿಸುವಾಗ ಅಬ್ಬರದ ಅಲೆಯೊಂದು ಬಂದಿದ್ದು, ಯುವಕನನ್ನು ಸೆಳೆದುಕೊಂಡಿತು. ಮೊಬೈಲ್ ಹಿಡಿದ ಕೈಯಲ್ಲಿಯೇ ಸಮುದ್ರಕ್ಕೆ ಬಿದ್ದ ಆ ಯುವಕ ಅನತಿ ದೂರದವರೆಗೆ ಕ್ರಮಿಸಿದನ್ನು ಅಲ್ಲಿದ್ದ ಮೀನುಗಾರರು ನೋಡಿದರು.
ತಕ್ಷಣ ಸಮುದ್ರಕ್ಕೆ ಹಾರಿದ ಮೀನುಗಾರರು ಈಜಿ ಆ ಯುವಕನನ್ನು ತಡಕ್ಕೆ ತಂದರು. ಕೈ ಮುಗಿದು ನಿಂತಿದ್ದ ಯುವತಿಗೆ ಆತನನ್ನು ಒಪ್ಪಿಸಿದರು. ಈ ವೇಳೆಗಾಗಲೇ ಯುವಕ ಅಸ್ವಸ್ಥನಾಗಿದ್ದು, ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆ ಯುವಕ ಸಮುದ್ರಕ್ಕೆ ಬಿದ್ದರೂ ಯುವತಿ ಸಹಾಯ ಯಾಚಿಸಲಿಲ್ಲ. ಸಮೀಪ ಇದ್ದವರನ್ನು ಕೂಗಿ ಕರೆಯಲಿಲ್ಲ. ಯುವಕ ಸಮುದ್ರಕ್ಕೆ ಬಿದ್ದು ಕೂಗಿದರೂ ಆಕೆ ಸುಮ್ಮನೆ ನಿಂತಿರುವುದನ್ನು ನೋಡಿದ ಜನ ಮೊದಲು `ಅವರಿಬ್ಬರು ತಮಾಷೆ ಮಾಡುತ್ತಿದ್ದಾರೆ’ ಎಂದು ಭಾವಿಸಿದರು. ನಿಮಿಷದ ನಂತರ ಯುವಕನ ಕೂಗಾಟ ಜೋರಾದಾಗ ಪರಿಸ್ಥಿತಿ ಅರಿತು ಸಹಾಯಕ್ಕೆ ಧಾವಿಸಿದರು.
ಅಲ್ಲಿದ್ದ ಜನರೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಗೋಕರ್ಣ ಪ್ರಾಥಮಿಕ ಕೇಂದ್ರದಲ್ಲಿ ಆ ಯುವಕನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಅದಾದ ನಂತರ ಯುವಕನನ್ನು ಮಣಿಪಾಲ್ ಆಸ್ಪತ್ರೆಗೆ ಕಳುಹಿಸಿದ್ದಾರೆ.