ವಕೀಲರ ಸಂಘಕ್ಕೆ ಅಧ್ಯಕ್ಷರಾದ ನಂತರ ನಾಗರಾಜ ನಾಯಕ ಅವರು ಮತ್ತೊಂದು ಹೋರಾಟದ ಮುಂಚೂಣಿವಹಿಸಿದ್ದು, ಶುಕ್ರವಾರ ಶಿರಸಿಗೆ ಹೋಗಿ ಅವರು ಪ್ರತಿಭಟನೆ ನಡೆಸಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯ ಜನರ ಅನುಕೂಲಕ್ಕಾಗಿ ಧಾರವಾಡದಲ್ಲಿಯೇ ಹೈಕೋರ್ಟ ಪೀಠ ಮುಂದುವರೆಯಬೇಕು. ಉತ್ತರ ಕನ್ನಡ ಹೈಕೋರ್ಟ ವ್ಯಾಪ್ತಿಯನ್ನು ಮಂಗಳೂರಿಗೆ ಸ್ಥಳಾಂತರಸಲು ಬಿಡುವುದಿಲ್ಲ’ ಎಂದವರು ಹೇಳಿದ್ದಾರೆ.
ಧಾರವಾಡ ಉಚ್ಚ ನ್ಯಾಯಾಲಯ ಪೀಠದ ವ್ಯಾಪ್ತಿಯಲ್ಲಿರುವ ಉತ್ತರಕನ್ನಡ ಜಿಲ್ಲೆಯನ್ನು ಪ್ರಸ್ತಾಪಿತ ಮಂಗಳೂರು ಪೀಠದ ವ್ಯಾಪ್ತಿಗೆ ಸೇರ್ಪಡೆ ಮಾಡುವುದನ್ನು ಅನೇಕರು ವಿರೋಧಿಸಿದ್ದಾರೆ. ಜಿಲ್ಲೆಯ ವಕೀಲರು ಇದಕ್ಕೆ ದೊಡ್ಡ ಧ್ವನಿಯಾಗಿದ್ದು, ಶಿರಸಿ ವಕೀಲರ ಸಂಘ, ಉತ್ತರಕನ್ನಡ ಜಿಲ್ಲಾ ವಕೀಲರ ಸಂಘ ಹಾಗೂ ವಿವಿಧ ಸಂಘ-ಸAಸ್ಥೆಗಳ ನೇತೃತ್ವದಲ್ಲಿ ಈ ದಿನ ಶಿರಸಿಯಲ್ಲಿ ಪ್ರತಿಭಟನೆ ನಡೆದಿದೆ. ಈ ವೇಳೆ ಪ್ರತಿಭಟನಾಕಾರರು ಮುಖ್ಯ ನ್ಯಾಯಮೂರ್ತಿ, ರಾಜ್ಯಪಾಲ, ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರಕ್ಕೆ ತಹಸೀಲ್ದಾರ ಮೂಲಕ ತಮ್ಮ ಬೇಡಿಕೆಗಳನ್ನು ಸಲ್ಲಿಕೆ ಮಾಡಿದ್ದಾರೆ.
ಶಿರಸಿ ನಗರದ ಬಿಡ್ಕಿಬೈಲ್‌ನಿಂದ ಪ್ರತಿಭಟನಾಕಾರರು ಮೆರವಣಿಗೆ ಮಾಡಿದ್ದಾರೆ. ಅಂಬೇಡ್ಕರ್ ಭವನದಲ್ಲಿ ಸಭೆ ಸೇರಿದ ಜನ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ನಾಗರಾಜ ನಾಯಕ ಅವರು ಭಾಷಣ ಮಾಡಿ `ಹೈಕೋರ್ಟ ಪೀಠ ಧಾರವಾಡದಲ್ಲಿಯೇ ಮುಂದುವರೆಯಬೇಕು. ಅದನ್ನು ಬದಲಿಸುವುದಾದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸಬೇಕು’ ಎಂದು ಹೇಳಿದ್ದಾರೆ. `ಜನರಿಗೆ ಮನೆ ಬಾಗಿಲಿಗೆ ನ್ಯಾಯ ದೊರೆಯಬೇಕು ಎಂಬ ಉದ್ದೇಶದಿಂದ ನ್ಯಾಯಾಲಯಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಆದರೆ ನ್ಯಾಯ ಪಡೆಯಲು ಕಕ್ಷಿದಾರರಿಗೆ ಹಣಕಾಸಿನ ಹಾಗೂ ಸಮಯದ ದೃಷ್ಟಿಯಿಂದ ಹೊರೆಯಾಗುವ ಹಾಗೇ ಮಾಡುವುದು ಸರಿಯಲ್ಲ’ ಎಂದಿದ್ದಾರೆ.
ಶಿರಸಿ ವಕೀಲರ ಸಂಘದ ಅಧ್ಯಕ್ಷ ಸಿ ಎಫ್ ಈರೇಶ, ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ, ಪ್ರಮುಖರಾದ ಉಷಾ ಹೆಗಡೆ, ಎಂ ಎನ್. ಭಟ್ಟ ಕಾರೆಕೊಪ್ಪ, ಶ್ರೀಧರ ಮೊಗೇರ, ಉಪೇಂದ್ರ ಪೈ ಅವರು ಇದಕ್ಕೆ ಬೆಂಬಲ ನೀಡಿದ್ದಾರೆ. ಧಾರವಾಡ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ ಡಿ ಹಿರೇಮಠ, ವಕೀಲರಾದ ರಾಜೀವ ರೇವಣಕರ್, ಉಷಾ ಐನಕೈ, ಹೈಕೋರ್ಟ್ ನ್ಯಾಯವಾದಿ ಎ ಪಿ ಹೆಗಡೆ ಜಾನ್ಮನೆ ಅವರು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ.