ಕಾಡಿನ ದಾರಿ ತಪ್ಪಿ ಕುಮಟಾಗೆ ಬಂದಿದ್ದ ಕಾಡುಹಂದಿ ಊರಿನಲ್ಲಿದ್ದ ನಾಯಿಗೆ ಹೆದರಿ ಬಾವಿಗೆ ಬಿದ್ದಿದೆ. ಬಾವಿಯಲ್ಲಿದ್ದರೂ ಬೇರೆಯವರನ್ನು ಬೆದರಿಸುತ್ತಿದ್ದ ಆ ಕಾಡುಹಂದಿಗೆ ಹಗ್ಗ ಕಟ್ಟಿ ಮೇಲೆತ್ತಲಾಗಿದೆ.
ಕುಮಟಾದ ಬರ್ಗಿಯ ಗಜನಿ ಪ್ರದೇಶದ ಭತ್ತದ ಗದ್ದೆಗೆ ಕಾಡುಹಂದಿ ನುಗ್ಗಿತ್ತು. ಅಲ್ಲಿನ ಭತ್ತದ ಬೆಳೆ ಹಾಳು ಮಾಡುತ್ತಿದ್ದ ಹಂದಿಯನ್ನು ನೋಡಿದ ನಾಯಿಗಳು ಅದರ ಬೆನ್ನಟ್ಟಿದ್ದವು. ನಾಯಿ ಬೊಗಳುವ ಸದ್ದು ಕೇಳಿ ಆ ಹಂದಿ ಕಾಡಿನ ಕಡೆ ಓಡಲು ಶುರು ಮಾಡಿದ್ದು, ಅಲ್ಲಿದ್ದ ನೆಲಬಾವಿಯಲ್ಲಿ ಆಯತಪ್ಪಿ ಬಿದ್ದಿತು. ಬಾವಿಯಿಂದ ಮೇಲೆ ಬರಲು ಆ ಹಂದಿಯಿAದ ಸಾಧ್ಯವಾಗಲಿಲ್ಲ. ಶುಕ್ರವಾರ ಬೆಳಗ್ಗೆ ಬಾವಿಯಿಂದ ಬುಸು ಬುಸು ಸದ್ದು ಬರುತ್ತಿದ್ದು, ಸಮೀಪ ಹೋದ ಜನರಿಗೆ ಕಾಡುಹಂದಿ ಕಾಣಿಸಿತು. 1ಕ್ವಿಂಟಲ್’ಗೂ ಅಧಿಕ ಬಾರವಿದ್ದ ಹಂದಿಯನ್ನು ಮೇಲೆತ್ತುವುದು ಸವಾಲಾಗಿತ್ತು.
ಊರಿನವರು ಹಂದಿ ಕಥೆಯನ್ನು ಅರಣ್ಯ ಇಲಾಖೆಯವರಿಗೆ ತಿಳಿಸಿದರು. ಅರಣ್ಯ ಸಿಬ್ಬಂದಿ ವನ್ಯಜೀವಿ ರಕ್ಷಕ ಅಶೋಕ ನಾಯ್ಕ ಅವರಿಗೆ ಫೋನ್ ಮಾಡಿದರು. ಗ್ರಾಮಸ್ಥರ ಸಹಾಯಪಡೆದ ಅಶೋಕ ನಾಯ್ಕ ಅವರು ಬಾವಿಯಲ್ಲಿದ್ದ ಹಂದಿಯ ಹೊಟ್ಟೆಗೆ ಹಗ್ಗ ಕಟ್ಟಿದರು. ಹಂತ ಹಂತವಾಗಿ ಹಗ್ಗ ಎಳೆದು ಆ ಹಂದಿಯನ್ನು ಮೇಲೆತ್ತಿದರು. ಹಂದಿಗೆ ಯಾವುದೇ ಗಾಯ ಆಗದಿರುವುದನ್ನು ಖಚಿತಪಡಿಸಿಕೊಂಡು ಕಾಡಿಗೆ ಬಿಟ್ಟರು.