ರಾಜ್ಯದ ಅನೇಕ ಕಡೆ ಸರ್ಕಾರಿ ಶಾಲೆಗಳಿಗೆ ಸರ್ಕಾರ ಕಳಪೆ ಗುಣಮಟ್ಟದ ಶೂ ಹಾಗೂ ಸಾಕ್ಸ್ ನೀಡಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶವ್ಯಕ್ತವಾಗಿದ್ದು, ಸಮಗ್ರ ತನಿಖೆಗೆ ಲೋಕಾಯುಕ್ತ ಸಂಸ್ಥೆ ಮುಂದಾಗಿದೆ. ಹೀಗಾಗಿ, ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕಳಪೆ ಶೂ ನೀಡಿದ್ದರೆ ಆ ಬಗ್ಗೆ ಮಾಹಿತಿ ನೀಡುವಂತೆ ಲೋಕಾಯುಕ್ತರು ಮನವಿ ಮಾಡಿದ್ದಾರೆ.
ವಿದ್ಯಾವಿಕಾಸ ಯೋಜನೆ ಅಡಿ ಸರ್ಕಾರ ಮಕ್ಕಳಿಗೆ ಶೂ ಹಾಗೂ ಸಾಕ್ಸ ನೀಡುತ್ತದೆ. 2026-27ನೇ ಸಾಲಿನಲ್ಲಿ ಅನೇಕರಿಗೆ ಅತ್ಯಂತ ಕಳಪೆ ಗುಣಮಟ್ಟದ ಸಾಮಗ್ರಿ ಪೂರೈಕೆ ನಡೆದಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ನಡುವೆ ಲೋಕಾಯುಕ್ತರು ಸಹ ತನಿಖೆ ನಡೆಸಲು ಸಿದ್ಧರಾಗಿದ್ದಾರೆ. ಜಿಲ್ಲಾ ಪಂಚಾಯತದಿoದಲೂ ಪ್ರತ್ಯೇಕ ತಂಡವೊoದು ಇದೇ ವಿಷಯವಾಗಿ ತನಿಖೆ ನಡೆಸಲಿದೆ. ಆ ತಂಡದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಇರಲಿದ್ದಾರೆ. ಜೊತೆಗೆ ಜನರಿಂದ ಬರುವ ದೂರು ಆಧರಿಸಿ ಲೋಕಾಯುಕ್ತರು ಸ್ವತಂತ್ರ ತನಿಖೆ ನಡೆಸಲಿದ್ದಾರೆ.
ಸದ್ಯ ಅನೇಕ ಕಡೆ ಬಳಸಿದ ತಕ್ಷಣವೇ ಅಥವಾ ಕೆಲವೇ ದಿನಗಳಲ್ಲಿ ಶೂ ಹರಿದುಹೋಗುವುದು, ಅಡಿಭಾಗ ಕಳಚಿಕೊಳ್ಳುವುದು, ಅತಿದೊಡ್ಡ ಗಾತ್ರದ ಅಥವಾ ಸರಿಯಾಗಿ ಹೊಂದಿಕೆಯಾಗದ ಶೂ ಪೂರೈಕೆ ನಡೆದ ದೂರುಗಳಿವೆ. ಸಾಕ್ಸ್ಗಳಲ್ಲೂ ಇದೇ ರೀತಿಯ ದೋಷಗಳು ಕಂಡುಬAದಿರುವ ಬಗ್ಗೆ ದೂರುಗಳು ಬಂದಿವೆ. ಪೂರೈಕೆದಾರರ ಜಿಎಸ್‌ಟಿ ನೋಂದಣಿ ಹಾಗೂ ಬಿಲ್‌ಗಳ ಬಗ್ಗೆಯೂ ಅನೇಕ ಪ್ರಶ್ನೆಗಳು ಉದ್ಬವಿಸಿದೆ. ದೂರುಗಳ ಹಿನ್ನೆಲೆಯಲ್ಲಿ ಶೂ ಮತ್ತು ಸಾಕ್ಸ್ಗಳನ್ನು ಅಧಿಕೃತ ಸಂಸ್ಥೆಗಳು ಪ್ರಮಾಣೀಕರಿಸಿದ್ದವೆಯೇ? ಹಾಗೂ ಪೂರೈಕೆಯಾಗಿರುವ ಉತ್ಪನ್ನಗಳು ನಿಜವಾಗಿಯೂ ಪ್ರಮಾಣೀಕರಿಸಲ್ಪಟ್ಟ ಉತ್ಪನ್ನಗಳೇ? ಎನ್ನುವ ಬಗ್ಗೆ ತನಿಖೆ ನಡೆಯಲಿದೆ.
ಉತ್ತರ ಕನ್ನಡ ಜಿಲ್ಲೆಯ ವಿವಿಧ ಪ್ರಾಥಮಿಕ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿತರಿಸಲಾಗಿರುವ ಸ್ಯಾಂಡಲ್ & ಶೂಗಳು ಕಳಪೆ ಗುಣಮಟ್ಟದ್ದಾಗಿರುವ ಬಗ್ಗೆ ವಿದ್ಯಾರ್ಥಿಗಳ ಪಾಲಕರು ಸೆಪ್ಟೆಂಬರ್ 18ರೊಳಗಾಗಿ ಕಚೇರಿಯ ದೂರವಾಣಿ ಸಂ:08382-295293, 220198 ಅಥವಾ ವಾಟ್ಸ್ಆಫ್ ಸಂಖ್ಯೆ: 9364062572, 9364062676, 9364062677ಗೆ ತಿಳಿಸಬೇಕು ಎಂದು ಕಾರವಾರದ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಹೇಳಿದ್ದಾರೆ.