ಯಲ್ಲಾಪುರದ ದೇವಿ ಮೈದಾನದಲ್ಲಿ 44 ವರ್ಷಗಳಿಂದ ಗಣೇಶ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಕಳೆದ ನಾಲ್ಕು ವರ್ಷದಿಂದ ಇಲ್ಲಿ ಹಬ್ಬದ ಅವಧಿಯಲ್ಲಿ ಪ್ರತಿ ದಿನ ಅನ್ನದಾನ ಸೇವೆ ನಡೆಯುತ್ತಿದೆ.
ಗಣೇಶ ಚತುರ್ಥಿ ಹಿನ್ನಲೆ ಇಲ್ಲಿ ಹಬ್ಬದ 11 ದಿನಗಳ ಕಾಲ ಭಕ್ತರಿಗೆ ಪ್ರಸಾದ ವಿತರಣೆ ನಡೆಯುತ್ತದೆ. ನಿತ್ಯ ನೂರಾರು ಜನ ಆಗಮಿಸಿ ಅನ್ನ ಪ್ರಸಾದ ಸ್ವೀಕರಿಸುತ್ತಿದ್ದು, ಅದೇ ಪ್ರಮಾಣದಲ್ಲಿ ದಾನಿಗಳು ಸಹಕಾರ ನೀಡಿದ್ದಾರೆ. ರುಚಿ ಜೊತೆ ಶುಚಿತ್ವಕ್ಕೂ ಮೊದಲ ಆದ್ಯತೆ ನೀಡಿ ಇಲ್ಲಿ ಪ್ರಸಾದ ಭೋಜನ ಸಿದ್ದಪಡಿಸಲಾಗುತ್ತಿದೆ. ವ್ಯವಸ್ಥಿತ ಸಂಘಟನೆ, ಶಿಸ್ತುಬದ್ಧ ಸ್ವಯಂ ಸೇವಕರ ಇಚ್ಚಾಶಕ್ತಿಯಿಂದ ಈ ಕಾರ್ಯಗಳೆಲ್ಲವೂ ಸರಾಗವಾಗಿ ಸಾಗುತ್ತಿದೆ.
ಬುಧವಾರ ಪಟ್ಟಣದ ದೇವಿಮೈದಾನಲದಲ್ಲಿ ಗಣೇಶ ಉತ್ಸವದ ಕಳೆದ ಸಾಲಿನ ಅಢಾವೆ ಪತ್ರಿಕೆಯನ್ನು ಬಿಡಗಡೆಗೊಳಿಸಲಾಗಿದೆ. ಈ ವೇಳೆ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಗಣೇಶ ಪತ್ತಾರ ಅವರು ಮಾತನಾಡಿ `ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗಣೇಶ ಉತ್ಸವ ವೈಭವಯುತವಾಗಿ ನಡೆಸಲಾಗುತ್ತಿದೆ. ಅತ್ಯಂತ ಶೃದ್ಧಾ-ಭಕ್ತಿಯಿಂದ ಇಲ್ಲಿ ಗಣೇಶನ ಪೂಜೆ ನಡೆಯುತ್ತಿದೆ. ಈ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಬೇಕು’ ಎಂದು ಆಮಂತ್ರಣ ನೀಡಿದ್ದಾರೆ.
ಸಮಿತಿ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ ಅವರು ಮಾತನಾಡಿ `ಈ ಬಾರಿ 6 ದಿನಗಳ ಕಾಲ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅದರಂತೆ, ಸೆಪ್ಟೆಂಬರ್ 17ರಂದು ಸವಣಗೇರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 18ರಂದು ಆನಗೋಡ ಭಜನಾ ಮಂಡಳಿಯಿAದ ಭಜನೆ, 19ರಂದು ಪ್ರಸಿದ್ಧ ಕಲಾವಿದರಿಂದ ಗಾನ ವೈಭವ, 20ರಂದು ಪ್ರಸಿದ್ಧ ಕಲಾವಿದರಿಂದ ಸುದರ್ಶನ ಗರ್ವಭಂಗ ಯಕ್ಷಗಾನ, 21ರಂದು ಛದ್ಮವೇಷ ಸ್ಪರ್ಧೆ, 22ರಂದು ನಾಗೇಂದ್ರ ವೈದ್ಯ ತಂಡದಿoದ ಸಂಗೀತ ಕಾರ್ಯಕ್ರಮ ನಡೆಯಲಿದೆ’ ಎಂಬ ಮಾಹಿತಿ ನೀಡಿದ್ದಾರೆ.
ಗಣೇಶ ಉತ್ಸವ ಸಮಿತಿಯ ಪ್ರಮುಖರಾದ ಪುಂಡಲೀಕ ಶೆಟ್ಟಿ, ನಾಗೇಶ ರಾಯ್ಕರ್, ವಿಜಯಶಂಕರ ನಾಯಕ, ಅಮೃತ ಬದ್ದಿ, ನಯನ ಇಂಗಳೆ, ದತ್ತಾತ್ರೇಯ ಸಭಾಹಿತ, ನಾರಾಯಣ ಗೋಪಾಲ ಭಟ್ಟ, ಪದ್ಮಾ ಪೈ, ಮಂಜುಳಾ ದಾಬುಲ್ಕರ್, ನಾಗರಾಜ, ರವಿ ಭಜಂತ್ರಿ, ನಾಗೇಂದ್ರ ಶೆಟ್ಟಿ, ಗಣೇಶ ಶಾನಭಾಗ, ನಾಗರಾಜ ಬಾಂದೇಕರ್ ಸೇರಿ ಇನ್ನಿತರರು ಈ ಎಲ್ಲಾ ಕಾರ್ಯಕ್ರಮಗಳಿಗೆ ಜನರನ್ನು ಆಮಂತ್ರಿಸಿದ್ದಾರೆ.