ಗೋಕರ್ಣದಿಂದ ಮುರುಡೇಶ್ವರಕ್ಕೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದ ಇಸ್ರೇಲ್’ನ ಮಾರ್ಚಾವಿ ಅಸ್ಸಾಪ್ ಅವರ ಹರಕೆಗೆ ತಡೆ ಬಿದ್ದಿದೆ. ವೀಸಾ ಮುಗಿದರೂ ಭಾರತದಲ್ಲಿಯೇ ನೆಲೆಸಿದ್ದ ಕಾರಣ ಅವರನ್ನು ಹೊನ್ನಾವರ ಪೊಲೀಸರು ವಶಕ್ಕೆಪಡೆದಿದ್ದಾರೆ.
ವರ್ಷದ ಹಿಂದೆಯೇ ಭಾರತ ಪ್ರವಾಸಕ್ಕೆ ಆಗಮಿಸಿದ್ದ ಇಸ್ರೇಲ್’ನ ಮಾರ್ಚಾವಿ ಅಸ್ಸಾಪ್ ಅವರ ವೀಸಾ ಅವಧಿ ಮುಗಿದಿದ್ದರೂ ಅವರು ಅವರ ದೇಶಕ್ಕೆ ಮರಳಿರಲ್ಲ. ಕಾನೂನುಬಾಹಿರವಾಗಿ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಓಡಾಡಿಕೊಂಡಿದ್ದರು. ಹೊನ್ನಾವರದ ಹಳದಿಪುರದಲ್ಲಿ ಮಾರ್ಚಾವಿ ಅಸ್ಸಾಪ್ ಅವರು ಈ ದಿನ ಅಲೆದಾಡುತ್ತಿದ್ದರು. ಅವರ ವರ್ತನೆ ನೋಡಿದ ಜನ ಪೊಲೀಸರಿಗೆ ಫೋನ್ ಮಾಡಿದರು. ಪೊಲೀಸರು ಅಲ್ಲಿಗೆ ಆಗಮಿಸಿ ದಾಖಲೆ ಪ್ರಶ್ನಿಸಿದರು. ಮಾರ್ಚಾವಿ ಅಸ್ಸಾಪ್ ಅವರ ದಾಖಲೆಗಳ ಪರಿಶೀಲನೆ ಮಾಡಿದಾಗ ಅವರ ವೀಸಾ ಅವಧಿ 2025ರ ಏಪ್ರಿಲ್ ಅವಧಿಯಲ್ಲಿಯೇ ಮುಗಿದಿರುವುದು ಗಮನಕ್ಕೆ ಬಂದಿತು. ಅದಾಗಿಯೂ, ಅವರು ಭಾರತದಲ್ಲಿಯೇ ವಾಸಿಸುತ್ತಿದ್ದ ಕಾರಣ ಪೊಲೀಸರು ಕ್ರಮ ಜರುಗಿಸಿದರು.
ಗೋಕರ್ಣದಿಂದ ಮುರುಡೇಶ್ವರದ ಕಡೆ ಕಾಲ್ನಡಿಗೆಯಲ್ಲಿ ತೆರಳುವುತ್ತಿರುವುದಾಗಿ ಮಾರ್ಚಾವಿ ಅಸ್ಸಾಪ್ ಅವರು ಹೇಳಿಕೊಂಡರು. ವೀಸಾ ಮುಗಿದ ಕಾರಣ ಅದಕ್ಕೂ ಇಲ್ಲಿ ಅವಕಾಶವಿಲ್ಲ ಎಂದು ಪೊಲೀಸರು ವಿವರಿಸಿದರು. ಸದ್ಯ ಅವರನ್ನು ವಶಕ್ಕೆಪಡೆಯಲಾಗಿದ್ದು, ಅಗತ್ಯ ಕಾನೂನು ಪ್ರಕ್ರಿಯೆ ಮುಗಿಸಿ ಬೆಂಗಳೂರಿನ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ ಹಸ್ತಾಂತರಿಸುವ ಸಿದ್ಧತೆ ನಡೆದಿದೆ.
.