ಭಟ್ಕಳ ಆಟೋ ಚಾಲಕ-ಮಾಲಕ ಸಂಘದವರು ಸ್ಥಾಪಿಸಿದ್ದ ಗಣೇಶ ಮಂಟಪ ಮೇಲೆ ಕಲ್ಲು ತೂರಾಟ ನಡೆದಿದ್ದು, `ಕಿಡಿಗೇಡಿ ಸಿಗುವವರೆಗೂ ಗಣೇಶ ವಿಸರ್ಜನೆ ಮಾಡುವುದಿಲ್ಲ’ ಎಂದು ಆಟೋ ಚಾಲಕ-ಮಾಲಕರ ಸಂಘದ ಸಂಘದ ಸದಸ್ಯರು ಹೇಳಿದ್ದಾರೆ. ಗಣೇಶೋತ್ಸವ ಪೆಂಡಾಲ್ ಮೇಲೆ ಕಲ್ಲು ಎಸೆದಿರುವ ಘಟನೆಗೆ ಸಂಬoಧಿಸಿದoತೆ ಆಟೋ ಚಾಲಕ-ಮಾಲಕರ ಸಂಘ ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದಾರೆ.
`ಗಣೇಶೋತ್ಸವ ಪೆಂಡಾಲ್‌ನ ಹಿಂಭಾಗದ ಶೆಡ್ ಮೇಲೆ ಬೆಳಗ್ಗೆ ಸುಮಾರು 7.20ರ ವೇಳೆಗೆ ಕಲ್ಲು ಬಿದ್ದಿರುವುದು ನಿಜ’ ಎಂದು ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ ತಿಳಿಸಿದ್ದಾರೆ. `ಪೆಂಡಾಲ್ ಮೇಲೆ ಬಿದ್ದಿರುವುದು ಕಲ್ಲಲ್ಲ… ಬಾಲ್ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಬಾಲ್ ಬಿದ್ದಿದೆ ಎಂಬ ಆರೋಪವನ್ನು ಸಂಘದ ಅಧ್ಯಕ್ಷರು ತಳ್ಳಿಹಾಕಿದ್ದು, ಪೆಂಡಾಲ್ ಮೇಲೆ ಕಲ್ಲು ಬಿದ್ದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಕಲ್ಲು ಎಲ್ಲಿಂದ ಬಂತು? ಯಾರು ಎಸೆದರು? ಎಂಬುದು ಸದ್ಯಕ್ಕೆ ತಿಳಿದಿಲ್ಲ. ಘಟನೆ ನಡೆದ ತಕ್ಷಣವೇ ಭಟ್ಕಳ ಶಹರ ಪೊಲೀಸ್ ಠಾಣೆಯ ಪಿಐ ದಿವಾಕರ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ವೆಂಕಟೇಶ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
`ಘಟನೆಯ ಸತ್ಯಾಸತ್ಯತೆ ಪತ್ತೆಹಚ್ಚಲು ಪೆಂಡಾಲ್‌ನ ಹಿಂಭಾಗದಲ್ಲಿರುವ ಅಂಜುಮಾನ್ ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಸಂಘದ ವತಿಯಿಂದ ಪೊಲೀಸರಿಗೆ ಮನವಿ ಮಾಡಲಾಗಿದೆ. ಈ ನಡುವೆ ಕಲ್ಲು ಎಸೆತ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವವರೆಗೆ ಗಣೇಶ ವಿಸರ್ಜನೆ ಮಾಡದಿರಲು ಆಟೋ ಚಾಲಕ-ಮಾಲಕರ ಸಂಘ ನಿರ್ಧರಿಸಿದೆ’ ಎಂವರು ಹೇಳಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಿದ ಬಳಿಕವೇ ಗಣೇಶ ವಿಸರ್ಜನೆ ನಡೆಸಲಾಗುವುದು ಎಂದು ಸಂಘಟನೆ ತಿಳಿಸಿದೆ. ಈ ನಿರ್ಧಾರಕ್ಕೆ ಉಳಿದ ಮೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೂ ಸಹಮತ ವ್ಯಕ್ತಪಡಿಸಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರು ಮಾಹಿತಿ ನೀಡಿದರು.