`ಕ್ರೀಡೆಯಿಂದ ಮಕ್ಕಳಲ್ಲಿನ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ಸೋಲು ಗೆಲುವು ಎನ್ನುವುದಕ್ಕಿಂತ ಹೆಚ್ಚಾಗಿ ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯ’ ಎಂದು ಸ್ಕೊಡ್ ವೆಸ್ ಸಂಸ್ಥೆಯ ಕಾರ್ಯದರ್ಶಿ ಸರಸ್ವತಿ ಎನ್ ರವಿ ಅವರು ಹೇಳಿದ್ದಾರೆ.
ಸ್ಕೊಡ್ ವೆಸ್ ಸಂಸ್ಥೆ ಹಾಗೂ ಬೆಂಗಳೂರಿನ ಟ್ರೆಲ್ಲೆಬೋರ್ಗ್ ಪ್ರೈ ಲಿ ಸಹಭಾಗಿತ್ವದಲ್ಲಿ ಶಿರಸಿ ನಗರದ ಲಯನ್ಸ್ ಶಾಲಾ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು `ಕ್ರೀಡಾ ತರಬೇತಿ ಯೋಜನೆಯಡಿಯಲ್ಲಿ ಶಿರಸಿ ಹಾಗೂ ಯೆಲ್ಲಾಪುರ ತಾಲೂಕಿನ ಸುಮಾರು 1500 ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಹಂತದಲ್ಲಿ ತರಬೇತಿ ನೀಡಲಾಗಿದೆ. ಶಿರಸಿ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಸುಮಾರು 250 ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ, ಶೂ, ನೀರಿನ ಬಾಟಲಿ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಬ್ಯಾಗ್ ಇತ್ಯಾದಿ ಅವಶ್ಯಕಗಳನ್ನೊಳಗೊಂಡ ಕ್ರೀಡಾ ಕಿಟ್ ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಗ್ರಾಮೀಣ ಹಾಗೂ ಹಿಂದುಳಿದ, ಬುಡಕಟ್ಟು ವಿದ್ಯಾರ್ಥಿಗಳಿಗೂ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ಪ್ರೋತ್ಸಾಹಿಸುವುದಕ್ಕೆ ಈ ಯೋಜನೆ ಜಾರಿಗೆ ತರಲಾಗಿದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಹೆಗಡೆ ಅವರು ಮಾತನಾಡಿ `ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಸಿಗುವ ಪ್ರೋತ್ಸಾಹ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸ್ಕೊಡ್ ವೆಸ್ ಸಂಸ್ಥೆ ಮುಂದೆ ಬಂದು ಪ್ರೌಢಶಾಲಾ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ’ ಎಂದರು. ಲಯನ್ಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಕೆ ಬಿ ಲೋಕೇಶ್ ಹೆಗಡೆ, ಜಂಟಿ ಕಾರ್ಯದರ್ಶಿ ವಿನಯ ಹೆಗಡೆ ಮಾತನಾಡಿದರು. ಲಯನ್ಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಣಪತಿ ಗೌಡ, ಪ್ರೋಗ್ರೆಸಿವ್ ಪ್ರೌಢಶಾಲೆಯ ಮುಖ್ಯಶಿಕ್ಷಕ ದಿನೇಶ್ ನೇತ್ರೇಕರ್, ಮಾರಿಕಾಂಬಾ ಪ್ರೌಢಶಾಲೆಯ ದೈಹಿಕ ಶಿಕ್ಷಕ ಪ್ರಶಾಂತ ಗಾಂವ್ಕಾರ್, ಲಯನ್ಸ್ ಪ್ರೌಢಶಾಲೆಯ ದೈಹಿಕ ಶಿಕ್ಷಕ ನಾಗರಾಜ ಜೋಗಳೇಕರ್, ಡಾನ್ ಬಾಸ್ಕೊ ಪ್ರೌಢಶಾಲೆಯ ದೈಹಿಕ ಶಿಕ್ಷಕಿ ವಾಣಿಶ್ರೀ, ಸ್ಕೊಡ್ ವೆಸ್ ಸಂಸ್ಥೆಯ ವೀರೇಂದ್ರ ಉಪಸ್ಥಿತರಿದ್ದರು. ಸ್ಕೊಡ್ ವೆಸ್ ಸಂಸ್ಥೆಯ ಕಾರ್ಯಕ್ರಮ ವಿಭಾಗದ ಮುಖ್ಯಸ್ಥರಾದ ನಾರಾಯಣ ಹೆಗಡೆ ಅವರು ಸ್ವಾಗತಿಸಿದರು. ಯೋಜನಾ ಸಂಯೋಜಕ ಸೂರ್ಯ ನಿರ್ವಹಿಸಿದರು.