ಸರ್ಕಾರಿ ಕಾಮಗಾರಿಗಳ ಕಳಪೆ ಗುಣಮಟ್ಟದ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲು ಮುಂದಾಗಿದ್ದ ಹೊನ್ನಾವರ ಹೊಸಾಕುಳಿಯ ಎಚ್ ಆರ್ ಗಣೇಶ ಅವರಿಗೆ ಜೀವ ಬೆದರಿಕೆ ಬಂದಿದೆ. ತಡ ರಾತ್ರಿ ಬಿಳಿ ಬಣ್ಣದ ಇನೋವಾ ಹಾಗೂ ಕಪ್ಪು ಬಣ್ಣದ ಮಹೇಂದ್ರ ಥಾರ್’ನಲ್ಲಿ ಬಂದ ಐದು ಜನ ಅವರನ್ನು ಬೆದರಿಸಿದ್ದಾರೆ.
ಹೊನ್ನಾವರ ಹೊಸಾಕುಳಿಯ ಹರ್ಬಾತ್‌ಕೇರಿಯಲ್ಲಿ ಎಚ್ ಆರ್ ಗಣೇಶ ಅವರು ವಾಸವಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತರಾಗಿರುವ ಅವರು ಹೊಸಾಕುಳಿ ಗ್ರಾಮ ಪಂಚಾಯತ ಮಾಜಿ ಸದಸ್ಯರೂ ಆಗಿದ್ದಾರೆ. 2024ರಲ್ಲಿ ಹೊಸಾಕುಳಿ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ನಡೆದ ಅಕ್ರಮದ ಕುರಿತು ಅವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ. ಆ ವಿಷಯವಾಗಿ ಎಚ್ ಆರ್ ಗಣೇಶ ಅವರು ಗಜನಕೇರಿ ಭಾಸ್ಕೇರಿಯ ಸುರೇಶ ಗಣಪತಿ ಶೆಟ್ಟಿ ಅವರ ದ್ವೇಷ ಕಟ್ಟಿಕೊಂಡಿದ್ದಾರೆ. ಸದ್ಯ ಹೊಸಾಕುಳಿಯಲ್ಲಿ ನಡೆದ ಸರ್ಕಾರಿ ಕಾಮಗಾರಿಗಳಲ್ಲಿನ ದೋಷಗಳ ಬಗ್ಗೆ ಎಚ್ ಆರ್ ಗಣೇಶ ಅವರಿಗೆ ಮಾಹಿತಿ ಬಂದಿದ್ದು, ಆ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡುವ ಸಿದ್ಧತೆ ಮಾಡಿದ್ದಾರೆ. ಇದನ್ನು ಸಹಿಸದ ಸುರೇಶ ಶೆಟ್ಟಿ ಅವರು ತಮ್ಮ ತಂಡದೊoದಿಗೆ ಆಗಮಿಸಿ ಬೆದರಿಕೆ ಒಡ್ಡಿದ್ದಾರೆ.
ಸೆಪ್ಟೆಂಬರ್ 3ರ ರಾತ್ರಿ 10.30ಕ್ಕೆ ಆರೋಳ್ಳಿಯ ಅಕ್ಕಿಶಂಭಟ್ಟರ ಮನೆ ತಿರುವಿನ ಬಳಿ ಸತೀಶ ಭಟ್ಟರ ಜೊತೆ ಮಾತನಾಡುತ್ತಿರುವಾಗ ಅಲ್ಲಿ ಬಿಳಿ ಬಣ್ಣದ ಇನೋವಾ ಕಾರು ಹಾಗೂ ಕಪ್ಪು ಬಣ್ಣದ ಮಹೇಂದ್ರ ಥಾರ್ ಆಗಮಿಸಿದೆ. ಆ ಕಾರಿನಲ್ಲಿ ಸುರೇಶ ಶೆಟ್ಟಿ, ಜೀವನ ಸುರೇಶ ಶೆಟ್ಟಿ ಅವರ ಜೊತೆ ಹೊಸಾಕುಳಿ ಸಣ್ಮನೆಯ ಕಿರಣ ಕೃಷ್ಣ ಹೆಗಡೆ, ಹರ್ಬಾತಕೇರಿಯ ಶೇಷಾ ಸುಬ್ರಾಯ ಹೆಗಡೆ, ಭಾಸ್ಕೇರಿ ಗುಡ್ಡೆಬಾಳದ ಗಣೇಶ ತಿಮ್ಮಣ್ಣ ಹೆಗಡೆ ಅವರು ಆಗಮಿಸಿದ್ದಾರೆ. ಅವರೆಲ್ಲರೂ ಸೇರಿ `ಸಂತೆಗುಳಿ ಶಾಲೆಯ ಕ್ರೀಡಾ ವೇದಿಕೆ ಬಳಿ ನಾಪತ್ತೆ ಮಾಡುವೆ’ ಎಂದು ಎಚ್ ಆರ್ ಗಣೇಶ ಅವರಿಗೆ ಬೆದರಿಸಿದ್ದಾರೆ. `ಈ ಹೆದರಿಕೆಗೆಲ್ಲ ಬಗ್ಗಲ್ಲ’ ಎಂದ ಎಚ್ ಆರ್ ಗಣೇಶ ಅವರು ಈ ವೇಳೆ ಜಗಳಕ್ಕೆ ಮುಂದಾಗಿದ್ದಾರೆ. ಎಚ್ ಆರ್ ಗಣೇಶ ಅವರ ಬೊಬ್ಬೆ ಕೇಳಿ ಅಲ್ಲಿ ಇನ್ನಷ್ಟು ಜನ ಜಮಾಯಿಸಿದ್ದು, ಇದನ್ನು ನೋಡಿ ಆ ಐದು ಜನ ಅಲ್ಲಿಂದ ಪರಾರಿಯಾಗಿದ್ದಾರೆ.
ಅದಾದ ನಂತರ ಎಚ್ ಆರ್ ಗಣೇಶ ಅವರಿಗೆ ಪದೇ ಪದೇ ಫೋನ್ ಕಾಲ್ ಬರಲು ಶುರುವಾಗಿದೆ. ಒಟ್ಟು 11 ಬಾರಿ ಫೋನ್ ಮಾಡಿದವರು ಬೆದರಿಕೆ ಒಡ್ಡಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ಎಚ್ ಆರ್ ಗಣೇಶ ಅವರು ಕೋರ್ಟಿನಲ್ಲಿ ಹೇಳಿದ್ದಾರೆ. ಕೋರ್ಟಿನ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.