ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸ್ಥಾನ ತಪ್ಪಿಸಿಕೊಂಡ ಭಟ್ಕಳ-ಹೊನ್ನಾವರದ ಶಾಸಕ ಮಂಕಾಳು ವೈದ್ಯ ಅವರು `ಉತ್ತರ ಕನ್ನಡ ಜಿಲ್ಲೆಯನ್ನು ಗೋವಾಗೆ ಸೇರಿಸಿ’ ಎಂದು ಅಧೀವೇಶನದಲ್ಲಿ ಹೇಳಿದ್ದಾರೆ. `ಎಲ್ಲಾ ರೀತಿಯಲ್ಲಿಯೂ ಜಿಲ್ಲೆಗೆ ಅನ್ಯಾಯವಾಗುತ್ತಿದ್ದು, ನಾವು ಅಲ್ಲಿಯಾದರೂ ಬದುಕುತ್ತೇವೆ’ ಎಂದವರು ಹೇಳಿದ್ದಾರೆ.
ಕಸ್ತೂರಿ ರಂಗನ್ ವರದಿ ಕುರಿತು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳಿಗೆ ಅಧಿವೇಶನದಲ್ಲಿ ಮಾತನಾಡಲು ಅವಕಾಶ ಸಿಕ್ಕಿದ್ದು, ಈ ವೇಳೆ ಮಂಕಾಳು ವೈದ್ಯ ಅವರು ಉತ್ತರ ಕನ್ನಡ ಜಿಲ್ಲೆಯನ್ನು ಕರ್ನಾಟಕದಿಂದಲೇ ಬೇರ್ಪಡಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ. `ಎಲ್ಲಿಯೂ ಬೇಡವಾದ ಯೋಜನೆಗಳನ್ನು ಉತ್ತರ ಕನ್ನಡಕ್ಕೆ ತರಲಾಗುತ್ತಿದೆ. ಸಮುದ್ರದ ಅಂಚಿಗೆ ಹೋದರೆ ಸಿ ಆರ್ ಜಡ್ ಸಮಸ್ಯೆ. ಈ ಕಡೆ ಬಂದರೆ ಅರಣ್ಯ ಸಮಸ್ಯೆ. ಬೇಡದ ಎಲ್ಲಾ ಯೋಜನೆಗಳ ಅನುಷ್ಠಾನ ಇಲ್ಲಿ ನಡೆಯುತ್ತಿದ್ದು, ನಮ್ಮನ್ನು ಗೋವಾಗೆ ಬಿಟ್ಟುಕೊಟ್ಟರೆ ಅಲ್ಲಿಯಾದರೂ ಬದುಕುತ್ತೇವೆ’ ಎಂದವರು ಹೇಳಿದ್ದಾರೆ. `ಈ ಹಿಂದೆ ಶಾಸಕನಾಗಿದ್ದ ಅವಧಿಂiÀiಲ್ಲಿಯೇ ನಾನು ಈ ವಿಷಯ ಪ್ರಸ್ತಾಪ ಮಾಡಿದ್ದೆ’ ಎಂದು ಮಂಕಾಳು ವೈದ್ಯ ಅವರು ನೆನಪಿಸಿದ್ದಾರೆ.
ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರು ಕಸ್ತೂರಿರಂಗನ್ ವರದಿ ಜಾರಿಯಿಂದ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ ಹಾಗೂ ಜನವಸತಿ ಪ್ರದೇಶಗಳ ಮೇಲೆ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದರು. ಜನರ ಹಿತಾಸಕ್ತಿ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ವಿರೋಧಿಸುವುದಾಗಿ ಅವರು ಸ್ಪಷ್ಟಪಡಿಸಿದರು. ಇದೇ ಸಂದರ್ಭದಲ್ಲಿ `ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯು ಹೊರಡಿಸಿರುವ ಸರ್ಕಾರಿ ಭೂಮಿಯಲ್ಲಿರುವ ನಿವೇಶನಗಳನ್ನು ತೆರಿಗೆ ವ್ಯಾಪ್ತಿಯಿಂದ ಕೈಬಿಡುವ ಕುರಿತ ಆದೇಶವನ್ನು ಹಿಂಪಡೆಯಬೇಕು’ ಶಿವರಾಮ ಹೆಬ್ಬಾರ್ ಅವರು ಆಗ್ರಹಿಸಿದರು. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರು ಸಹ `ಉತ್ತರ ಕನ್ನಡ ಜಿಲ್ಲೆಯ 600 ಗ್ರಾಮಗಳನ್ನು ಸೂಕ್ಷಪ್ರದೇಶ ಎಂದು ಗುರುತಿಸಿದ್ದು, ಅದರಿಂದ ಜನಜೀವನಕ್ಕೆ ತೊಂದರೆ ಆಗಲಿದೆ’ ಎಂದು ಹೇಳಿದರು. `ಕಸ್ತೂರಿ ರಂಗನ್ ವರದಿ ಜಾರಿ ಆದಲ್ಲಿ ಜಿಲ್ಲೆಗೆ ಕೈಗಾರಿಕೆಗಳು ಬರುವ ಹಾಗಿಲ್ಲ. ಅದರಿಂದ ಉದ್ಯೋಗ ಸಮಸ್ಯೆ ಎದುರಾಗಲಿದೆ’ ಎಂಬ ಆತಂಕವ್ಯಕ್ತಪಡಿಸಿದರು.
ಮಾಜಿ ಸಚಿವ ಎಚ್ ಕೆ ಪಾಟೀಲ್ ಅವರು ವಿಧಾನಸೌಧದಲ್ಲಿ ಮಾತನಾಡಿದ್ದು, `ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಭೂಮಿ ಹೋರಾಟಗಾರ ರವೀಂದ್ರ ನಾಯ್ಕ ಅವರು ಜನ ಜಾಗೃತಿ ಮೂಡಿಸುತ್ತಿದ್ದು, ಅವರ ಕಾರ್ಯ ಪ್ರಶಂಸನೀಯ’ ಎಂದರು. `ಕಸ್ತೂರಿ ರಂಗನ್ ವರದಿಗೆ ವಿರೊಧಿಸಿ ಹೋರಾಟಗಾರರ ವೇದಿಕೆಯು ಸರ್ಕಾರಕ್ಕೆ ಸಲ್ಲಿಸಿದ ಶಿಪಾರಸ್ಸನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದವರು ಆಗ್ರಹಿಸಿದರು. `ಅರಣ್ಯ ಭೂಮಿ ಹಕ್ಕು ಹೋರಾಟದ ವೇದಿಕೆ ಹೋರಾಟವು ಇಂದು ಜನ ಚಳುವಳಿಯಾಗಿ ರೂಪುಗೊಂಡಿರುವುದು ಗಮನಾರ್ಹ ಅಂಶ . ಇಂತಹ ಹೋರಾಟದ ಯಶಸ್ಸಿನ ಹಿಂದೆ ಮಾಜಿ ಸ್ಪೀಕರ್ ಹಾಗೂ ಸಾಮಾಜಿ ಚಿಂತಕ ಕಾಗೋಡ ತಿಮ್ಮಪ್ಪ ಹಾಗೂ ವಿಶ್ರಾಂತ ನ್ಯಾಯ ಮೂರ್ತಿ ಎಚ್ ಎನ್ ನಾಗಮೋಹನದಾಸ ಅವರು ಸಾಕಷ್ಟು ಬೆಂಬಲಿಸುತ್ತೀರುವುದು ವಿಶೇಷ’ ಎಂದವರು ವಿವರಿಸಿದರು.