ಯಲ್ಲಾಪುರದ ಮಂಜುನಾಥ ನಗರದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪಿಸೈ ಮಹಾವೀರ ಕಾಂಬಳೆ ಅವರು ದಾಳಿ ಮಾಡಿದ್ದು, ಪೊಲೀಸರನ್ನು ನೋಡಿದ ತೆಲಂಗಾರಿನ ಬಸವರಾಜ ಕಟ್ಟಿಮನಿ ಅವರು ಓಡಿ ಪರಾರಿಯಾಗಿದ್ದಾರೆ. ಮಂಜುನಾಥ ನಗರದ ದಶರಥ ಮಾಚಕನವರ್, ಗಣೇಶ ಕಟ್ಟಿಮನಿ, ಜಾನ್ಸನ್ ನ್ಯಪ್ಪನವರ್, LIC ಕಚೇರಿ ಬಳಿಯ ಮಂಜುನಾಥ ಬೋವಿವಡ್ಡರ್ ಹಾಗೂ ಮಚ್ಚಿಗಲ್ಲಿಯ ರಾಜೇಶ ಮೊದಲಿನಯರ್ ಅವರು ಸಿಕ್ಕಿಬಿದ್ದಿದ್ದಾರೆ.
ಮಂಜುನಾಥ ನಗರದ ಕಾರ್ಮಿಕ ದಶರಥ ಮಾಚಪ್ಪ ಮಾಚಕನವರ್ ಅವರು ಸೆ 20ರಂದು ಕಾನೂನುಬಾಹಿರ ಕ್ರೀಡೆಯಾದ ಅಂದರ್-ಬಾಹರ್ ಆಡಲು ಸಮಾನ ಮನಸ್ಕರನ್ನು ಆಮಂತ್ರಿಸಿದ್ದರು. ಅದರ ಪ್ರಕಾರ ಮಂಜುನಾಥ ನಗರದ ಚಾಲಕ ಗಣೇಶ ಹನುಮಂತ ಕಟ್ಟಿಮನಿ, ಮಚ್ಚಿಗಲ್ಲಿಯ ಕಟ್ಟಡ ಕಾರ್ಮಿಕ ರಾಜೇಶ ಮಾಣಿಕ್ಯ ಮೊದಲಿಯರ್, ಎಲ್ ಐ ಸಿ ಕಚೇರಿ ಬಳಿಯ ಪೇಂಟಿAಗ್ ಕಾರ್ಮಿಕ ಮಂಜುನಾಥ ಅನಂತ ಬೋವಿವಡ್ಡರ್, ಮಂಜುನಾಥ ನಗರದ ಪೇಟಿಂಗ್ ಕಾರ್ಮಿಕ ಜಾನ್ಸನ್ ಚೆನ್ನಪ್ಪ ಇನ್ಯಪ್ಪನವರ್, ತೆಲಂಗಾರದ ಬಸವರಾಜ ಪಕ್ಕೀರಪ್ಪ ಕಟ್ಟಿಮನಿ ಅವರು ಆಗಮಿಸಿದ್ದರು. ಅವರೆಲ್ಲರೂ ಸೇರಿ ಮಂಜುನಾಥ ನಗರದ ಸಹ್ಯಾದ್ರಿ ಕೊ ಆಪರೇಟಿವ್ ಸೊಸೈಟಿಯ ಹಿಂದೆ ಕಾಸು ಕಟ್ಟಿ ಕಾನೂನುಬಾಹಿರ ಆಟವಾಡುತ್ತಿದ್ದರು.
ಇಸ್ಪಿಟ್ ಎಲೆಗಳ ಮೇಲೆ ಹಣ ಹರಡಿಕೊಂಡಿದ್ದ ಅವರ ಬಗ್ಗೆ ವ್ಯಕ್ತಿಯೊಬ್ಬರು ಪೊಲೀಸರಿಗೆ ಫೋನ್ ಮಾಡಿದರು. ಪಿಸೈ ಮಹಾವೀರ ಕಾಂಬಳೆ ಅವರು ತಮ್ಮ ತಂಡದ ಜೊತೆ ಅಲ್ಲಿ ದಾಳಿ ಮಾಡಿದರು. ಪೊಲೀಸರನ್ನು ನೋಡಿದ ತೆಲಂಗಾರಿನ ಬಸವರಾಜ ಫಕ್ಕಿರಪ್ಪ ಕಟ್ಟಿಮನಿ ಅವರು ತಕ್ಷಣ ಅಲ್ಲಿಂದ ಓಡಿ ಪರಾರಿಯಾದರು. ಉಳಿದ ಐವರು ಓಡಲಾಗದೇ ಅಲ್ಲಿಯೇ ಕುಳಿತಿದ್ದು, ಪೊಲೀಸರು ಅವರೆಲ್ಲರನ್ನು ವಶಕ್ಕೆಪಡೆದರು. ಇಸ್ಪಿಟ್ ಆಟಕ್ಕೆ ಬಳಸಿದ್ದ ಎಲೆಗಳ ಜೊತೆ ಅಲ್ಲಿ ಹರಡಿಬಿದ್ದಿದ್ದ 4050ರೂ ಹಣವನ್ನು ವಶಕ್ಕೆಪಡೆದರು. ಓಡಿ ಹೋದವರನ್ನು ಸೇರಿಸಿ ಒಟ್ಟು ಆರು ಜನರ ವಿರುದ್ಧ ಕೇಸು ದಾಖಲಿಸಿದರು.