60ಲಕ್ಷಕ್ಕೂ ಅಧಿಕ ಲಾಭಗಳಿಸಿರುವುದಾಗಿ ಘೋಷಿಸಿದ ಕಳಚೆ ಸಹ್ಯಾದ್ರಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಆರ್ಥಿಕ ಶಿಸ್ತು ಅಸ್ತವ್ಯಸ್ಥವಾಗಿರುವ ವಿಷಯವೊಂದು ಮುನ್ನಲೆಗೆ ಬಂದಿದೆ. ಲೆಕ್ಕಪತ್ರಗಳ ದೃಢೀಕರಣ ಸರಿಯಿಲ್ಲದಿದ್ದರೂ ಲಾಭ ಘೋಷಿಸಿದ ಬಗ್ಗೆ ಆಕ್ಷೇಪ ಸಲ್ಲಿಕೆಯಾಗಿದೆ. ಈ ಸೊಸೈಟಿಯ ನಿರ್ದೇಶಕರೇ ಇಲ್ಲಿನ ಅಪರಾತಪರದ ಬಗ್ಗೆ ಸರ್ಕಾರಕ್ಕೆ ದೂರಿದ್ದು, ತನಿಖೆ ಶುರುವಾಗಿದೆ.
ಯಲ್ಲಾಪುರದಲ್ಲಿ ಕಳಚೆಯಲ್ಲಿ ಪ್ರಧಾನ ಶಾಖೆಹೊಂದಿದ ಕಳಚೆ ಸಹ್ಯಾದ್ರಿ ವಿವಿಧೋದ್ದೇಶ ಸಹಕಾರಿ ಸಂಘ ಯಲ್ಲಾಪುರದಲ್ಲಿಯೂ ಶಾಖೆಹೊಂದಿದೆ. ಜೊತೆಗೆ ಜೊಯಿಡಾ ಸೇರಿ ಇನ್ನಿತರ ಕಡೆಗಳಲ್ಲಿಯೂ ವ್ಯವಹಾರ ನಡೆಸುತ್ತಿದೆ. ದಶಕಗಳ ಹಿಂದೆಯೂ ಕಳಚೆ ಸೊಸೈಟಿ ವಿರುದ್ಧ ವಿವಿಧ ಆಕ್ಷೇಪಗಳು ಕೇಳಿ ಬಂದಿದ್ದು, ಮುಖ್ಯವಾಗಿ ಸರ್ಕಾರದಿಂದ ಬಂದ ಸಬ್ಸಿಡಿ ವಿಷಯದಲ್ಲಿ ಸಮಸ್ಯೆಯಾದ ಬಗ್ಗೆ ದೂರುಗಳಿದ್ದವು. ಸದ್ಯ ಸೊಸೈಟಿಯ ನಿರ್ದೇಶಕರೇ ಇಂಥಹ ಮತ್ತೊಂದು ವಿಚಾರವನ್ನು ಬಯಲಿಗೆಳೆದಿದ್ದಾರೆ. ಅದರಲ್ಲಿ 2025-26ನೇ ಸಾಲಿನ ಲೆಕ್ಕಪತ್ರಗಳಲ್ಲಿ ದೃಢೀಕರಣವಿಲ್ಲದ ದಾಖಲೆಗಳ ಬಗ್ಗೆ ಗಮನಸೆಳೆದಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.
ಕಳಚೆ ಸಹ್ಯಾದ್ರಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಸೂರ್ಯನಾರಾಯಣ ಭಟ್ಟ, ಗಜಾನನ ಭಟ್ಟ, ಶ್ರೀಪಾದ ಶಿವರಾಮ ಗಾಂವ್ಕರ್, ಶ್ರೀನಾಥ ತಿಮ್ಮಯ್ಯ ಹೆಗಡೆ, ಅರುಣ ಗುರುನಾಥ ನಾಯಕ ಅವರ ಹೆಸರಿನಲ್ಲಿ ಸಹಕಾರಿ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ಸೆಪ್ಟೆಂಬರ್ 24ರಂದು ಸಲ್ಲಿಕೆಯಾದ ಈ ದೂರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜೊತೆ ಕೆಡಿಸಿಸಿ ಬ್ಯಾಂಕಿನಿAದ ಬರಬೇಕಾದ ಪ್ರೋತ್ಸಾಹಧನದ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದು, ಅಲ್ಲಿನ ಮೊತ್ತಗಳಿಗೆ ದೃಢೀಕರಣ ದಾಖಲೆಗಳಿಲ್ಲದ ಬಗ್ಗೆ ದೂರಲಾಗಿದೆ. ಕೇಂದ್ರ ಸರ್ಕಾರದ ಶೇ 3ರಷ್ಟು ಪ್ರೋತ್ಸಾಹಧನ 513227, ಶೇ 2ರ ಬಡ್ಡಿ ಸಹಾಯಧನ 202817ರೂ ಹಾಗೂ ರಾಜ್ಯ ಸರ್ಕಾರದಿಂದ ಬರಬೇಕಿದ್ದ ಬಡ್ಡಿ 2310285ರ ಜೊತೆ ಕೆಡಿಸಿಸಿ ಬ್ಯಾಂಕಿನಿoದ ಬರಬೇಕಿದ್ದ ಬಡ್ಡಿ 1854674ರೂಪಾಯಿ ಎಂದು ಅಡಾವೆ ಪತ್ರಿಕೆಯಲ್ಲಿ ನಮೂದಿಸಲಾಗಿದೆ. ಆದರೆ, ಅದಕ್ಕೆ ದೃಢೀಕರಣ ಪತ್ರವಿರದ ಬಗ್ಗೆ ಸದಸ್ಯರು ಪ್ರಶ್ನಿಸಿದರೂ ಉತ್ತರ ಸಿಕ್ಕಿಲ್ಲ ಎಂದು ಆಕ್ಷೇಪಿಸಲಾಗಿದೆ.
ಇದಲ್ಲದೇ 7 ಲಕ್ಷ ರೂ ಖರ್ಚು ಹಾಕಿ ಮಂಜೂರಿ ಪಡೆಯುವ ಪ್ರಯತ್ನ ನಡೆದ ಬಗ್ಗೆಯೂ ದೂರು ಪತ್ರದಲ್ಲಿ ವಿವರಿಸಲಾಗಿದೆ. ಜೊತೆಗೆ 2003ರಿಂದಲೂ ಈ ನ್ಯೂನ್ಯತೆ ಮುಂದುವರೆಸಿಕೊoಡು ಬಂದ ಬಗ್ಗೆ ವಿವರಿಸಲಾಗಿದೆ. ಲೆಕ್ಕಪರಿಶೋಧನೆ ಸಮಯದಲ್ಲಿ ದೃಢೀಕರಣ ದಾಖಲೆಗಳಿಲ್ಲದೇ ಮೊತ್ತವನ್ನು ಲಾಭದಲ್ಲಿ ಸೇರಿಸುವುದು ಸರಿಯಲ್ಲ ಎಂದು ದೂರುದಾರ ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ. ಆ 26ರಂದು ಸೊಸೈಟಿಯ ಸಭೆ ನಡೆದಿದ್ದು, ಅಲ್ಲಿ ಈ ವಿಷಯ ಗಮನಕ್ಕೆ ಬಂದಿರುವುದಾಗಿ ದೂರುದಾರರು ಹೇಳಿದ್ದಾರೆ. ಈ ಕುರಿತು ದೂರು ಸ್ವೀಕರಿಸಿದ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ.