`ಕುಮಟಾದಿಂದ ಹೆಗಡೆ ಗ್ರಾಮಕ್ಕೆ ತೆರಳುವ ರಸ್ತೆ ಅಗಲೀಕರಣ ಅನಿವಾರ್ಯವಾಗಿದ್ದು, ರಸ್ತೆ ಅಗಲೀಕರಣದ ಜೊತೆ ಹೊಸ ರಸ್ತೆ ನಿರ್ಮಾಣ ಮಾಡಿಕೊಡಿ’ ಎಂದು ಆ ಭಾಗದ ಜನ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ. ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರನ್ನು ಭೇಟಿ ಮಾಡಿದ ಊರಿನ ಪ್ರಮುಖರು ತಮ್ಮ ಬೇಡಿಕೆಯನ್ನು ಲಿಖಿತವಾಗಿ ಸಲ್ಲಿಸಿದ್ದಾರೆ.
`ಹೆಗಡೆಯ ಅಘನಾಶಿನಿ ನದಿಗೆ ಹೊಸದಾಗಿ ಸೇತುವೆ ನಿರ್ಮಾಣವಾಗಿದ್ದು ಮಿರ್ಜಾನ ಹಿರೇಗುತ್ತಿ ಗೋಕರ್ಣ ಅಂಕೋಲಾ ಕಾರವಾರ ಕಡೆ ತೆರಳುವವರಿಗೆ ತುಂಬಾ ಅನುಕೂಲವಾಗಿದೆ. ಮಿರ್ಜಾನ ದಿಂದ ಕುಮಟಾಕ್ಕೆ 14ಕಿಮೀ ಆಗುತ್ತಿದ್ದು ಮಿರ್ಜಾನ ದಿಂದ ಈ ಸೇತುವೆ ಮೂಲಕ ಹೆಗಡೆ ಮಾರ್ಗವಾಗಿ ಪ್ರಯಾಣಿಸಿದರೆ ಕೇವಲ 5ಕಿಮೀ ಕುಮಟಾ ಸಿಗಲಿದೆ. ಇದರಿಂದ 9ಕಿಮೀ ಪ್ರಯಾಣ ಉಳಿತಾಯವಾಗಲಿದೆ. ಸದ್ಯ ಸೇತುವೆ ಕೆಲಸ ಪೂರ್ಣಗೊಂಡಿದ್ದು ಎರಡೂ ಕಡೆಯ ಸಂಪರ್ಕ ರಸ್ತೆ ಪೂರ್ಣಗೊಂಡಿಲ್ಲ. ಅಲ್ಲಿ ಮಣ್ಣು ಹಾಕಿ ಜಲ್ಲಿ ಹಾಗೇ ಬಿಡಲಾಗಿದ್ದು, ರಸ್ತೆ ಪರಿಪೂರ್ಣವಾಗಬೇಕಿದೆ’ ಎಂದವರು ವಿವರಿಸಿದ್ದಾರೆ. `ಮಿರ್ಜಾನ ಮಾದನಗೇರಿ ಗೋಕರ್ಣ ಅಂಕೋಲಾ ಕಡೆ ತೆರಳುವವರು, ಕುಮಟಾ ಕಡೆ ಬರುವವರು ಇದೇ ಮಾರ್ಗವಾಗಿ ಸಂಚರಿಸಲು ಪ್ರಾರಂಭಿಸಿದ್ದರಿoದ ವಾಹನ ದಟ್ಟಣೆ ಹೆಚ್ಚಾಗಿದೆ. ಅದರಿಂದ ಹೆಗಡೆ ಊರಿನ ರಸ್ತೆ ಸಂಪೂರ್ಣ ಹಾಳಾಗಿದೆ. ಎಲ್ಲಡೆ ಹೊಂಡಗಳು ಇದೆ. ರಸ್ತೆಯೂ ಇಕ್ಕಟ್ಟಾಗಿದೆ. ವಾಹನ ದಟ್ಟಣೆಯಿಂದ ಊರಿನ ಗ್ರಾಮಸ್ಥರು ಮಕ್ಕಳು ಪ್ರತಿನಿತ್ಯ ಆ ಇಕ್ಕಟ್ಟಾದ ರಸ್ತೆಯಲ್ಲಿ ಓಡಾಡುವುದೂ ಸಮಸ್ಯೆಯಾಗಿದೆ’ ಎಂದು ಸಮಸ್ಯೆ ವಿವರಿಸಿದ್ದಾರೆ.
`ಈ ಎಲ್ಲಾ ಕಾರಣ ಶೀಘ್ರವಾಗಿ ಹೆಗಡೆ ಮಾರ್ಗವಾಗಿ ಇಕ್ಕಟ್ಟಾದ ರಸ್ತೆ ಇರುವ ಕಡೆ ಇಲಾಖೆಯ ನಿಯಮಾನುಸಾರ ಅಗಲಿಕರಣಗೊಳಿಸಬೇಕು. ನಂತರ ಹೊಸ ರಸ್ತೆ ನಿರ್ಮಾಣ ಮಾಡಿಕೊಡಬೇಕು’ ಎಂದು ಮನವಿ ಸಲ್ಲಿಸಿದ್ದಾರೆ. ಊರಿನವರ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡುವ ಭರವಸೆ ನೀಡಿದ್ದಾರೆ. ಅಧಿಕಾರಿಗಳಿಂದ ವರದಿ ತರಿಸಿಕೊಂಡು ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.