ಹೆಂಡತಿ ಹಾಗೂ ಮಕ್ಕಳು ಬಿಟ್ಟು ಹೋದ ಕಾರಣ ಬೇಸರಗೊಂಡಿದ್ದ ಜಗದೀಶ ನಾಯ್ಕ ಅವರು ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದಾರೆ. ಇನ್ನೂ 38ನೇ ವಯಸ್ಸಿನಲ್ಲಿಯೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೊನ್ನಾವರದ ಚಿಕ್ಕನಗೋಡ ಹರವಾಲಿಯಲ್ಲಿ ಜಗದೀಶ ಗೋವಿಂದ ನಾಯ್ಕ ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಅವರು ಜೀವನ ನಡೆಸುತ್ತಿದ್ದರು. ಸಂಸಾರದಲ್ಲಿ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರ ಪತ್ನಿ ಹಾಗೂ ಮಕ್ಕಳು ದೂರವಾಗಿದ್ದರು. ಪತ್ನಿ ಹಾಗೂ ಮಕ್ಕಳನ್ನು ನೆನೆದು ಜಗದೀಶ ನಾಯ್ಕ ಅವರು ಕಣ್ಣೀರಾಗುತ್ತಿದ್ದರು. ಅವರು ದೂರವಾದ ಬೇಸರದಲ್ಲಿಯೇ ಇವರು ದಿನ ಕಳೆಯುತ್ತಿದ್ದರು.
ಆಪ್ತರು ಜೊತೆಗಿರದ ಕಾರಣ ಜಗದೀಶ ಗೋವಿಂದ ನಾಯ್ಕ ಅವರು ಜೀವನದಲ್ಲಿ ಜಿಗುಪ್ಸೆಗೆ ಒಳಗಾದರು. ಹೀಗಾಗಿ ಅವರು ದುಡುಕು ನಿರ್ಧಾರಕ್ಕೆ ಮುಂದಾಗಿದ್ದು, ಆತ್ಮಹತ್ಯೆಯ ಬಗ್ಗೆ ಯೋಚಿಸಿದರು. ತಮ್ಮ ಮನೆಯ ಅಂಚಿನಲ್ಲಿದ್ದ ಗೇರು ಮರ ಅವರಿಗೆ ಆತ್ಮಹತ್ಯೆಗೆ ಪ್ರಚೋದಿಸಿದ್ದು, ಅದೇ ಮರಕ್ಕೆ ಅವರು ಹಗ್ಗ ಕಟ್ಟಿ ನೇಣು ಹಾಕಿಕೊಂಡರು. ಗೇರು ಮರದ ಟೊಂಗೆಗೆ ಜಗದೀಶ ನಾಯ್ಕ ಅವರು ಜೋತಾಡುತ್ತಿರುವುದನ್ನು ಅವರ ಸಹೋದರ ವಿಶ್ವನಾಥ ನಾಯ್ಕ ಅವರು ನೋಡಿದರು. ತಕ್ಷಣ ಆ ಹಗ್ಗ ಬಿಚ್ಚಿ ಅವರನ್ನು ಹೊನ್ನಾವರ ಆಸ್ಪತ್ರೆಗೆ ಕರೆತಂದರು. ಆದರೆ, ಅಷ್ಟರೊಳಗೆ ಜಗದೀಶ ನಾಯ್ಕ ಅವರು ಸಾವನಪ್ಪಿದ್ದರು.
`ಸಮಸ್ಯೆಗೆ ಆತ್ಮಹತ್ಯೆಯೇ ಪರಿಹಾರವಲ್ಲ’