17 ವರ್ಷದ ಯುವಕನೊಬ್ಬ ಸಿದ್ದಾಪುರದಲ್ಲಿ ಸಿಕ್ಕಿದ್ದು, ಆತ ಯಾರು? ಎಲ್ಲಿಯವ? ಎಂದು ಮಾತ್ರ ಯಾರಿಗೂ ಗೊತ್ತಿಲ್ಲ. ಹೆಸರು-ವಿಳಾಸದ ಬಗ್ಗೆ ವಿಚಾರಿಸಿದರೂ ಆತ ಬಾಯ್ಬಿಡುತ್ತಿಲ್ಲ.
ಅಪರಿಚಿತ ಯುವಕನನ್ನು ನೋಡಿದ ಅಧಿಕಾರಿಗಳು ಆತನನನ್ನು ಶಿರಸಿಯ ಪಂಡಿತ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಮನೋಶಾಸ್ತ್ರಜ್ಞರ ಬಳಿ ಪರೀಕ್ಷೆಗೆ ಒಳಪಡಿಸಿದಾಗ ಆತನ ಹೆಸರು ಮಾತ್ರ ಗೊತ್ತಾಗಿದೆ. ಸಾಹಿಲ್ ಎಂದು ಆತ ಹೆಸರು ಹೇಳಿದ್ದು, ಇನ್ಯಾವುದೇ ಸುಳಿವು ಸಿಕ್ಕಿಲ್ಲ. ಸಾಕಷ್ಟು ಹುಡುಕಾಟ ನಡೆಸಿದರೂ ಆತನ ಪಾಲಕರ ಬಗ್ಗೆ ಮಾಹಿತಿ ದೊರೆತಿಲ್ಲ. ಆ ಯುವಕನನ್ನು ಪರೀಕ್ಷೆಗೆ ಒಳಪಡಿಸಿದಾಗ ಬುದ್ದಿಮಾಂದ್ಯನAತೆ ವರ್ತಿಸಿದ್ದು, ಆತನನ್ನು ವಿಶೇಷ ಆರೈಕೆ ಸಂಸ್ಥೆಗೆ ಅಧಿಕಾರಿಗಳು ಒಪ್ಪಿಸಿದ್ದಾರೆ.
ಸದ್ಯ ಆ ಯುವಕನ ಪೋಷಣೆ ಹಾಗೂ ರಕ್ಷಣೆಗಾಗಿ ಬಳ್ಳಾರಿಯ ಬುದ್ದಿಮಾಂದ್ಯ ಮಕ್ಕಳ ಆರೈಕೆಯುಳ್ಳ ವಸತಿ ನಿಲಯಕ್ಕೆ ದಾಖಲಿಸಲಾಗಿದೆ. ಬಳ್ಳಾರಿಯ ಮಕ್ಕಳ ಕಲ್ಯಾಣ ಸಮಿತಿಯ ಮೇಲ್ವಿಚಾರಣೆ ನಡೆಯುತ್ತಿದೆ. ಕಾನೂನಿನ ಪ್ರಕಾರ ಆ ಯುವಕ ಇನ್ನೂ ಬಾಲಕನಾಗಿರುವ ಕಾರಣ `ದತ್ತಕಕ್ಕೆ ಮುಕ್ತ’ ಮಾಡುವುದು ಅವಶ್ಯ. ಹೀಗಾಗಿ ಆ ಬಾಲಕನ ಜೈವಿಕ ಪಾಲಕರ ಕುರಿತು ದಾಖಲೆ ಶೋಧ ನಡೆದಿದೆ. ಮಕ್ಕಳ ಸಮಿತಿಯವರಿಗೆ ಇಲ್ಲಿಯೂ ಯಾವುದೇ ಮಾಹಿತಿ ಸಿಕ್ಕಿಲ್ಲ.
ಅದಾಗಿಯೂ, ಆ ಬಾಲಕನ ಭವಿಷ್ಯವನ್ನು ರೂಪಿಸುವ ಕುರಿತು ಮಗುವಿನ ಜೈವಿಕ ಪಾಲಕರ ಪತ್ತೆ ಅವಶ್ಯಕತೆಯಿರುವ ಕಾರಣ ಮಕ್ಕಳ ಕಲ್ಯಾಣ ಸಮಿತಿ ಈ ಪ್ರಕಟಣೆ ನೀಡಿದೆ. ಆ ಬಾಲಕನ ಬಗ್ಗೆ ಗೊತ್ತಿದ್ದವರು ಅಥವಾ ಅವರ ಪಾಲಕರು ಕೂಡಲೇ ಮಕ್ಕಳ ಕಲ್ಯಾಣ ಸಮಿತಿ-02, ಬಾಲಕರ ಬಾಲಮಂದಿರ ಕೋರ್ಟ ರಸ್ತೆ ಶಿರಸಿ ಹಾಜರಾಗುವಂತೆ ಸೂಚಿಸಲಾಗಿದೆ.