ಅಧಿಕ ಪ್ರಸಂಗಿ ವರ್ತನೆಯಿಂದಲೇ ಸ್ಪಸ್ಪೆಂಡ್ ಆಗಿದ್ದ ಕಾರವಾರದ ಹೆಡ್ ಕಾನ್ಸಟೇಬಲ್ ಸಂತೋಷ ನಾಯಕ ಅವರು ಪಿಐ ಜಯಶ್ರೀ ಮಾನೆ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಪೊಲೀಸ್ ಠಾಣೆಗೆ ಆಗಮಿಸಿದ ಅವರು ಅಲ್ಲಿದ್ದ ಇತರೆ ಪೊಲೀಸ್ ಸಿಬ್ಬಂದಿ ಜೊತೆಯೂ ದುರ್ನಡತೆ ಪ್ರದರ್ಶಿಸಿದ್ದಾರೆ.
ಕಾರವಾರದ ಸುಂಕೇರಿ ಕಠಿಣಕೋಣದಲ್ಲಿ ಸಂತೋಷ ಅಪ್ಪಾ ನಾಯಕ ಅವರು ವಾಸವಾಗಿದ್ದಾರೆ. 52 ವರ್ಷದ ಅವರು ಪೊಲೀಸ್ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾರವಾರದ ಟ್ರಾಫಿಕ್ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಆಗಿ ಅವರು ಕರ್ತವ್ಯಕ್ಕೆ ಹಾಜರಾಗಿದ್ದು, ಕರ್ತವ್ಯದಲ್ಲಿ ಲೋಪ ಎಸಗಿದ ಕಾರಣ ಅಮಾನತಾಗಿದ್ದಾರೆ. ಅವರ ಅಮಾನತು ಆದೇಶ ಜಾರಿಯಲ್ಲಿದ್ದು, ಆ ಬಗ್ಗೆ ವಿಚಾರಣೆ ನಡೆಯುತ್ತಿದೆ. ಅಮಾನತು ಆಗಿದ್ದರಿಂದ ಅವರು ಮೇಲಧಿಕಾರಿಗಳ ಮೇಲೆ ಸಿಟ್ಟಾಗಿದ್ದಾರೆ. ಹೀಗಾಗಿ ಕಾರವಾರ ಶಹರ ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ರಂಪಾಟ ಮಾಡಿದ್ದಾರೆ.
ಸೆಪ್ಟೆಂಬರ್ 26ರ ಮಧ್ಯಾಹ್ನ ಸಂತೋಷ ನಾಯಕ ಅವರು ಕಾರವಾರ ಶಹರ ಪೊಲೀಸ್ ಠಾಣೆಗೆ ನುಗ್ಗಿದ್ದಾರೆ. `ಎಲ್ಲಿ ಆ ಇನ್ಸಪೆಕ್ಟರ್?’ ಎಂದು ಅವರು ಕೂಗಿದ್ದಾರೆ. ಈ ವೇಳೆ ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಸಚಿನ್ ನಾಯ್ಕ ಅವರು ಸಂತೋಷ ನಾಯಕ ಅವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಈಗಾಗಲೇ ಸಿಟ್ಟಿನಲ್ಲಿದ್ದ ಸಂತೋಷ ನಾಯಕ ಅವರು `ಆ ಇನ್ಸಪೆಕ್ಟರ್‌ರನ್ನು ಕರಿಯಿರಿ. ಒಂದು ಕೈ ನೋಡಿಕೊಳ್ಳುವೆ’ ಎಂದು ಕೂಗಾಡಿದ್ದಾರೆ. `ಅವರನ್ನು ಎಂದಿಗೂ ಸುಮ್ಮನೆ ಬಿಡುವುದಿಲ್ಲ’ ಎಂದು ಸಹ ಹೇಳಿದ್ದಾರೆ. `ಎಸ್ಪಿ ಹೇಳಿದ ಕಾರಣ ನನ್ನ ವಿರುದ್ಧವೇ ವರದಿ ಸಲ್ಲಿಸಿ ಅಮಾನತು ಮಾಡಿಸಿದ್ದಾರೆ’ ಎನ್ನುತ್ತ ಮೇಲಧಿಕಾರಿಗಳನ್ನು ಬೈದಿದ್ದಾರೆ.
ಈ ವೇಳೆ ಅಲ್ಲಿ ಕರ್ತವ್ಯದಲ್ಲಿದ್ದ ಸಚಿನ್ ನಾಯ್ಕ ಅವರು ಪಿಐ ಜಯಶ್ರೀ ಮಾನೆ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಸಂಚಾರದಲ್ಲಿದ್ದ ಜಯಶ್ರೀ ಮಾನೇ ಅವರು ತಕ್ಷಣ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಆಗ, ಅಮಾನತು ಅಗಿದ್ದ ಸಂತೋಷ ನಾಯಕ ಅವರು ಜಯಶ್ರೀ ಮಾನೆ ಅವರ ಜೊತೆಯೂ ಅನುಚಿತವಾಗಿ ವರ್ತಿಸಿದ್ದಾರೆ. ಅವರ ಕರ್ತವ್ಯಕ್ಕೂ ಅಡ್ಡಿ ಮಾಡಿದ್ದಾರೆ. ಕೊನೆಗೆ ಅಲ್ಲಿದ್ದ ಇನ್ನಿತರ ಪೊಲೀಸ್ ಸಿಬ್ಬಂದಿ ಪರಿಸ್ಥಿತಿ ನಿಭಾಯಿಸಿದ್ದು, ಪೊಲೀಸ್ ಠಾಣೆಗೆ ಬಂದು ಗಲಾಟೆ ಮಾಡಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಿದ್ದಾರೆ.