ಭಟ್ಕಳದ ಬೆಳಕೆ, ಗರಡಿಹಿತ್ತು ಗ್ರಾಮದ ಭಂಟಗೊoಡ ದೇವಸ್ಥಾನದಲ್ಲಿ ನಡೆದ ಕಳ್ಳತನಲ್ಲಿ ಹನಿಪಾಬಾದ್’ನ ಸಯ್ಯದ್ ಯುನಿಸ್ ಕೈವಾಡವಿರುವುದು ದೃಢವಾಗಿದೆ. ದೇವಾಲಯಗಳನ್ನು ಗುರಿಯಾಗಿರಿಸಿಕೊಂಡು ಕಳ್ಳತನ ಮಾಡುತ್ತಿದ್ದ ಹೆಬಳೆ ತಲಹಾ ಕಾಲೋನಿಯ ಸಯ್ಯದ್ ಯೂನುಸ್ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ.
ಸೆಪ್ಟೆಂಬರ್ 28ರಂದು ಈ ದೇಗುಲದಲ್ಲಿ ಕಳ್ಳತನ ನಡೆದಿತ್ತು. ದೇವಾಲಯದ ಬೀಗ ಒಡೆದು ಕಳ್ಳತನ ಮಾಡಲಾಗಿದ್ದು, ಸೆಪ್ಟೆಂಬರ್ 29ರಂದು ಅದು ಬೆಳಕಿಗೆ ಬಂದಿತ್ತು. ಬಂಗಾರ ಹಾಗೂ ಬೆಳ್ಳಿ ಕದ್ದ ಕೇಸು ದಾಖಲಿಸಿದ ಪೊಲೀಸರು ಕಳ್ಳನ ಪತ್ತೆಗೆ ಶೋಧ ಶುರು ಮಾಡಿದ್ದರು. ಭಟ್ಕಳ ತಾಲೂಕಿನ ಹೆಬಳೆಯ ತಲಹಾ ಕಾಲೋನಿಯ ಹನಿಪಾಬಾದ್ ನಿವಾಸಿ ಸೈಯದ್ ಯೂನುಸ್ (26) ಪೊಲೀಸರ ಬಳಿ ಸಿಕ್ಕಿ ಬಿದ್ದರು. ಸಯ್ಯದ್ ಯುನಿಸ್ ಬಳಿ 1.7 ಲಕ್ಷ ರೂ ಮೌಲ್ಯದ ಆಭರಣಗಳಿದ್ದು ಅದು ಆ ದೇವಾಲಯದ್ದೇ ಆಗಿದ್ದವು.
ಸಿಕ್ಕಿಬಿದ್ದ ಆರೋಪಿಯಿಂದ ಪೊಲೀಸರು 5.340 ಗ್ರಾಂ ತೂಕದ ಸುಮಾರು 70 ಸಾವಿರ ಮೌಲ್ಯದ ಬಂಗಾರದ ಸರ, 20 ಗ್ರಾಂ ತೂಕದ ಸುಮಾರು 2,300 ಮೌಲ್ಯದ ಬೆಳ್ಳಿಯ ಕರಿಮಣಿ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 35 ಸಾವಿರ ಮೌಲ್ಯದ ಬೈಕನ್ನು ಜಪ್ತು ಮಾಡಿದ್ದಾರೆ. ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾಣು ಗುಪ್ತಾ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ದಿವಾಕರ ಪಿ.ಎಂ. ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ತನಿಖಾಧಿಕಾರಿ ಭರಮಪ್ಪ ಬೆಳಗಲಿ, ಪೊಲೀಸ್ ಉಪನಿರೀಕ್ಷಕ ಮಲ್ಲಿಕಾರ್ಜುನಯ್ಯ ಕೂರಾಣಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಮಂಜುನಾಥ ಗೊಂಡ, ಈರಣ್ಣ ಪೂಜೇರಿ, ಬಾಗಪ್ಪ ಕಡಕಲ್ ಮತ್ತು ನಿಂಗನಗೌಡ ಪಾಟೀಲ್ ಅವರು ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.