`ಯಲ್ಲಾಪುರ ಕ್ಷೇತ್ರ ಶಿವರಾಮ ಹೆಬ್ಬಾರ್ ಅವರ ರಾಜೀನಾಮೆಗೆ ಜನ ಕಾಯುತ್ತಿದ್ದು, ಅಗತ್ಯ ಬಿದ್ದರೆ ಅವರಿಂದ ರಾಜೀನಾಮೆ ಕೊಡಿಸುತ್ತೇವೆ’ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಅವರು ಹೇಳಿದ್ದಾರೆ. `ಉತ್ತರ ಕನ್ನಡ ದುಡ್ಡು ಅಥವಾ ಗೂಂಡಾ ರಾಜಕೀಯದ ನೆಲೆ ಅಲ್ಲ. ಅಧಿಕಾರ ಇರುವವರೆಗೆ ಕೆಲವರು ಮೆರೆಯಬಹುದಾಗಿದ್ದು, ಅಧಿಕಾರದಹೊರತು ಕ್ಷೇತ್ರಕ್ಕೆ ವಿದೇಯರಾಗಿ ಕೆಲಸ ಮಾಡಿದವರನ್ನು ಜನ ಮರೆಯಲ್ಲ’ ಎಂದು ಮಾರ್ಮಿಕ ಮಾತುಗಳನ್ನಾಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಶಿವರಾಮ ಹೆಬ್ಬಾರ್ ಅವರು ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾದ ವ್ಯಕ್ತಿ. ಅವರು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದನ್ನು ಜನ ನೋಡಿದ್ದಾರೆ. ಬಿಜೆಪಿಯಿಂದ ದೂರ ಉಳಿದಿರುವುದನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಶಾಸಕ ಹೆಬ್ಬಾರರು ಮುಂದಿನ ಚುನಾವಣೆಯವರೆಗೆ ಪಕ್ಷದ ಚೌಕಟ್ಟಿನಲ್ಲಿಯೇ ಇರಬೇಕು. ಪಕ್ಷದ ನಿಲುವಿಗೆ ವಿರುದ್ಧವಾಗಿ ಮಾತನಾಡುವದಾದರೆ ರಾಜೀನಾಮೆ ನೀಡಿ, ನಂತರ ಮಾತನಾಡಲಿ’ ಎಂದು ಸವಾಲು ಹಾಕಿದ್ದಾರೆ.
ಕಾರವಾರದಲ್ಲಿ ಮಾತನಾಡಿದ ಶಿವರಾಮ ಹೆಬ್ಬಾರ್ ಅವರು ತಮ್ಮನ್ನು ತಾವು `ಪ್ರೀ ಬರ್ಡ’ ಎಂದು ಕರೆದುಕೊಂಡಿದ್ದರು. `ಬಿಜೆಪಿ ಎಂಬುದು ವಾಷಿಂಗ್ ಮಿಶನ್ ಇದ್ದ ಹಾಗೇ’ ಎಂದಿದ್ದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಹರಿಪ್ರಕಾಶ ಕೋಣೆಮನೆ ಅವರು `ಶಾಸಕರು ಹುದ್ದೆಗೆ ತಕ್ಕಂತೆ ಮಾತನಾಡಬೇಕು’ ಎಂದು ಕಿವಿಮಾತು ಹೇಳಿದ್ದಾರೆ. `ಈ ಕ್ಷೇತ್ರದ ಜನರಿಗೆ ನಿಮ್ಮಿಂದ ಏನು ಪ್ರಯೋಜನವಾಗಿದೆ?’ ಎಂದು ಸಹ ಪ್ರಶ್ನಿಸಿದ್ದಾರೆ. `ಪಕ್ಷದಿಂದ ಉಚ್ಚಾಟನೆಯಾದರೂ ನೈತಿಕತೆ ಮರೆಯಬಾರದು’ ಎಂದು ಸಲಹೆ ನೀಡಿದ್ದಾರೆ.
ಬಿಜೆಪಿ ಯಲ್ಲಾಪುರ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಅವರು ಮಾತನಾಡಿ ‘ನಮ್ಮ ಮನೆ ನಮ್ಮ ಹಕ್ಕು’ ಆಂದೋಲನ ಯಶಸ್ವಿಯಾಗಿದ್ದು, ಸೆ.21ರಿಂದ 29ರವರೆಗೆ ಕ್ಷೇತ್ರದ ಬಹುತೇಕ ಪಂಚಾಯಿತಿ ವ್ಯಾಪ್ತಿಯಲ್ಲಿ ಸಹಿ ಸಂಗ್ರಹ ನಡೆಸಲಾಗಿದೆ. ಈ ಸಂದರ್ಭದಲ್ಲಿ ಯಲ್ಲಾಪುರ ಕ್ಷೇತ್ರದ ಶಾಸಕರು ಮತದಾರರಿಗೆ ದ್ರೋಹ ಎಸಗಿದ್ದಾರೆ ಎಂಬ ಅಭಿಪ್ರಾಯ ಮತದಾರರಿಂದ ವ್ಯಕ್ತವಾಗಿದೆ ಎಂದು ಹೇಳಿದರು. ಸರ್ಕಾರದ ಆದೇಶವನ್ನು ಹಿಂಪಡೆಯದಿದ್ದರೆ ಹೋರಾಟ ಮುಂದುವರಿಸಲಾಗುವುದು. ಬಿಜೆಪಿಯಿಂದ ಗೆದ್ದು ಕಾಂಗ್ರೆಸ್‌ನ ಎಂಎಲ್‌ಸಿಗಳಿಗೆ ಮತ ಹಾಕಿದವರಿಂದಲೇ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಸದರ ವಿರುದ್ಧವೂ ಸಲ್ಲದ ಮಾತುಗಳನ್ನು ಆಡಲಾಗಿದೆ ಎಂದು ಪ್ರಸಾದ ಹೆಗಡೆ ಹೇಳಿದರು. ರಾಜ್ಯ ಸರ್ಕಾರ ಪ್ರತಿಯೊಂದು ಹಂತದಲ್ಲೂ ‘ಚೊಂಬಿನ ಭಾಗ್ಯ’ ನೀಡುತ್ತಿದೆ ಎಂದು ಟೀಕಿಸಿದ ಅವರು, ಆಡಳಿತ ಸುಧಾರಿಸದಿದ್ದರೆ ಬಿಜೆಪಿ ವತಿಯಿಂದ ಚೊಂಬು ಹಿಡಿದು ಪ್ರತಿಭಟನೆ ನಡೆಸಲಾಗುವುದು ಎಂದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರಾಘವೇಂದ್ರ ಭಟ್ ಹಾಸಣಗಿ ಅವರು ಶಿವರಾಮ ಹೆಬ್ಬಾರ್ ಅವರ ನಡೆ ಖಂಡಿಸಿದ್ದಾರೆ. ಬಿಜೆಪಿ ಪ್ರಮುಖ ಗಣೇಶ ಪಾಟಣಕರ್ ಅವರು ಮಾತನಾಡಿ `ಶಿವರಾಮ ಹೆಬ್ಬಾರರು ಶಾಸಕರಾದಾಗ ಯಲ್ಲಾಪುರ ಸಿಂಗಾಪುರ ಆಗಲಿದೆ ಎಂಬ ಕನಸಿತ್ತು. ಆದರೆ ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿಯಾಗಿಲ್ಲ’ ಎಂದು ದೂರಿದ್ದಾರೆ. ಉಮೇಶ್ ಭಾಗ್ವತ್ ಕಳಚೆ, ಶ್ರೀಕಾಂತ್ ಹೆಬ್ಬಾರ್, ಜಿ ಆರ್. ಭಾಗ್ವತ್, ಮಹಾಬಲೇಶ್ವರ ಭಟ್ಟ ಇದರರು ಇದಕ್ಕೆ ಧ್ವನಿಗೂಡಿಸಿದ್ದಾರೆ.