ಕಿರವತ್ತಿ ಬಳಿಯ ಹೊಸಳ್ಳಿಯ ಕೃಷ್ಣಾ ಕಾಂಬಳೆ ಹಾಗೂ ಮಹೇಶ ಪೊಂಡೆ ಯಲ್ಲಾಪುರಕ್ಕೆ ಆಗಮಿಸಿದ್ದು, ಮಾದಕ ವ್ಯಸನ ಸೇವಿಸಿದ್ದಾರೆ. ಅಮಲಿನಲ್ಲಿ ಅಲೆದಾಡುತ್ತಿದ್ದ ಅವರಿಬ್ಬರ ವಿರುದ್ಧವೂ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಯಲ್ಲಾಪುರದ ಕಿರವತ್ತಿಯ ಹೊಸಳ್ಳಿಯಲ್ಲಿ ಕೃಷ್ಣಾ ವಿಠ್ಠಲ್ ಕಾಂಬಳೆ ಅವರು ವಾಸವಾಗಿದ್ದಾರೆ. 22 ವರ್ಷದ ಅವರು ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಅದೇ ಊರಿನಲ್ಲಿ ಮಹೇಶ ಲಕ್ಕು ಪೊಂಡೆ ಅವರು ವಾಸವಗಿದ್ದಾರೆ. 23 ವರ್ಷದ ಅವರು ಸಹ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಅಕ್ಟೊಬರ್ 1ರಂದು ಅವರಿಬ್ಬರು ಯಲ್ಲಾಪುರಕ್ಕೆ ಬಂದಿದ್ದು, ಕೃಷ್ಣಾ ಕಾಂಬಳೆ ಅವರು ಸರ್ಕಾರಿ ಆಸ್ಪತ್ರೆ ರಸ್ತೆ ಕಡೆ ಹೋಗಿದ್ದಾರೆ. ಮಹೇಶ ಪೊಂಡೆ ಅವರು ಲೋಕೋಪಯೋಗಿ ಉದ್ಯಾನವನದ ಬಳಿ ನಿಂತಿದ್ದಾರೆ. ಅಲ್ಲಿಯೇ ಅವರಿಬ್ಬರು ಗಾಂಜಾ ಸೇವಿಸಿ ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದು, ಇದನ್ನು ನೋಡಿದ ಜನ ಪೊಲೀಸರಿಗೆ ಫೋನ್ ಮಾಡಿದ್ದಾರೆ.
ಆ ದಿನ ಸಂಜೆ 7.45ರ ವೇಳೆಗೆ ಕೃಷ್ಣಾ ಕಾಂಬಳೆ ಅವರನ್ನು ಪಿಸೈ ರಾಜಶೇಖರ ವಂದಲಿ ಅವರು ವಶಕ್ಕೆಪಡೆದು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ರಾತ್ರಿ 8.30ರ ವೇಳೆಗೆ ಪಿಐ ಸುರೇಶ ಕಂಬಾರ ಅವರ ಬಳಿ ಮಹೇಶ ಪೊಂಡೆ ಅವರು ಸಿಕ್ಕಿ ಬಿದ್ದಿದ್ದಾರೆ. ಅವರಿಬ್ಬರ ವೈದ್ಯಕೀಯ ವರದಿಯಲ್ಲಿ ಮಾದಕ ವ್ಯಸನ ಸೇವನೆ ದೃಢವಾಗಿದೆ. ಹೀಗಾಗಿ ಪೊಲೀಸರು ಇಬ್ಬರ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ. ಜೊತೆಗೆ ಮಾದಕ ವ್ಯಸನ ಸೇವನೆ ಮಾಡದಂತೆ ತಾಕೀತು ಮಾಡಿದ್ದಾರೆ.