ಕುಮಟಾ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿದ್ದ ಗಣೇಶ ಹರಿಜನ ಅವರು ಖುರ್ಚಿ ಮೇಲೆ ಕುಳಿತ ಸ್ಥಿತಿಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಶವ ನೋಡಿದ ಮೂರುರು ಕ್ರಾಸ್ ಬಳಿಯ ಗುತ್ತಿಗೆದಾರ ಶ್ರೇಯಸ್ ಮುರುಡೇಶ್ವರ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕುಮಟಾದ ಹಳೇ ಮೀನು ಮಾರುಕಟ್ಟೆ ಬಳಿಯ ಪುರಸಭೆ ವಸತಿ ಗೃಹದಲ್ಲಿ ಗಣೇಶ ಈಶ್ವರ ಹರಿಜನ ಅವರು ವಾಸವಾಗಿದ್ದರು. 40 ವರ್ಷದ ಅವರು ಪೌರ ಕಾರ್ಮಿಕರಾಗಿ ಬದುಕು ಕಟ್ಟಿಕೊಂಡಿದ್ದರು. ಅವರು ಸರಾಯಿ ಕುಡಿಯುವುದನ್ನು ರೂಡಿಸಿಕೊಂಡಿದ್ದರು. ಈಚೆಗೆ ಅತಿಯಾಗಿ ಸರಾಯಿ ಸೇವಿಸುತ್ತಿದ್ದರು. ಕೆಲ ದಿನಗಳಿಂದ ಯಾವುದೋ ಒಂದು ವಿಷಯವನ್ನು ಅವರು ಮನಸ್ಸಿಗೆ ಹಚ್ಚಿಕೊಂಡಿದ್ದರು. ಅದೇ ವಿಚಾರವಾಗಿ ಕೊರಗುತ್ತಿದ್ದರು.
ಸೆಪ್ಟೆಂಬರ್ 30ರ ರಾತ್ರಿ 9.30ಕ್ಕೆ ಅವರನ್ನು ಅಲ್ಲಿನವರು ಕೊನೆಯದಾಗಿ ನೋಡಿದ್ದರು. ತಮ್ಮ ಕೊಠಡಿಯೊಳಗೆ ಹೋದ ಗಣೇಶ ಹರಿಜನ ಅವರು ಅಲ್ಲಿನ ಖುರ್ಚಿ ಮೇಲೆ ಕುಳಿತಿದ್ದರು. ಅಲ್ಲಿಯೇ ಅವರು ದುಡುಕು ನಿರ್ಧಾರಕ್ಕೆ ಮುಂದಾಗಿದ್ದು, ಬೆಡ್‌ಶೀಟ್ ಬಳಸಿ ಅಲ್ಲಿದ್ದ ಫ್ಯಾನಿಗೆ ನೇಣು ಹಾಕಿಕೊಂಡರು. ಖುರ್ಚಿ ಮೇಲೆ ಕುಳಿತ ಸ್ಥಿತಿಯಲ್ಲಿಯೇ ಅವರು ಸಾವನಪ್ಪಿದರು. ಭಟ್ಕಳ ಮೂಲದ ಗುತ್ತಿಗೆದಾರ, ಸದ್ಯ ಕುಮಟಾದಲ್ಲಿರುವ ಶ್ರೇಯಸ್ ದಿನೇಶ ಮುರುಡೇಶ್ವರ ಅವರು ಮರುದಿನ ಮಧ್ಯಾಹ್ನ 4 ಗಂಟೆಗೆ ಈ ಶವ ನೋಡಿ ಪೊಲೀಸರಿಗೆ ತಿಳಿಸಿ, ಪ್ರಕರಣ ದಾಖಲಿಸಿದರು.