ಗ್ರಾಮೀಣ ಭಾಗದ ಮಹಿಳೆಯರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಸರ್ಕಾರ `ಅಕ್ಕ ಕೆಫೆ’ ಶುರು ಮಾಡಿದ್ದು, ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆ ಈ ಅಡುಗೆ ಮನೆ ಸಿದ್ಧವಾಗಿದೆ. ಸಂಜೀವಿನಿ ಎನ್ಆರ್ಎಲ್ಎಂ ಯೋಜನೆಯಡಿ ದುಡಿಯುವ ಮಹಿಳೆಯರು ಒಗ್ಗಟ್ಟಿನಿಂದ ಕ್ಯಾಂಟೀನ್ ನಡೆಸುತ್ತಿದ್ದಾರೆ.
ಅಕ್ಕ ಕೆಫೆಗಳ ಮೂಲಕ ಮಹಿಳೆಯರು ಆಹಾರ ತಯಾರಿಕೆ, ಮಾರಾಟ, ಗ್ರಾಹಕರ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ ಸೇರಿದಂತೆ ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಸ್ವಂತ ಉದ್ಯಮವನ್ನು ಯಶಸ್ವಿಯಾಗಿ ನಡೆಸುವ ಅವಕಾಶ ಪಡೆಯುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗದಾತರಾಗುವ ಸಾಮರ್ಥ್ಯವೂ ವೃದ್ಧಿಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ಕ ಕೆಫೆ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದ್ದು, ಈಗಾಗಲೇ ಕಾರವಾರ ಮತ್ತು ಮುರುಡೇಶ್ವರದಲ್ಲಿ ಅಕ್ಕ ಕೆಫೆಗಳು ಕಾರ್ಯಾರಂಭ ಮಾಡಿವೆ. ಕಾರವಾರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕಡವಾಡದ ಶ್ರೀ ಸಿದ್ಧಿ ವಿನಾಯಕ ಮಹಿಳಾ ಸ್ವಸಹಾಯ ಗುಂಪಿನವರು 2025ರ ಜುಲೈನಲ್ಲಿ ಅಕ್ಕ ಕೆಫೆ ಶುರು ಮಾಡಿದ್ದು, ಈವರೆಗೆ 26 ಲಕ್ಷ ರೂ ವ್ಯವಹಾರ ಮಾಡಿದ್ದಾರೆ. 2025ರ ಅಕ್ಟೊಬರ್ ಅವಧಿಯಲ್ಲಿ ಮುರುಡೇಶ್ವರದಲ್ಲಿ ಅಕ್ಕ ಕೆಫೆ ಶುರುವಾಗಿದ್ದು, ಈವರೆಗೆ ಅಲ್ಲಿನವರು 18 ಲಕ್ಷ ರೂ ವ್ಯವಹಾರ ಮಾಡಿದ್ದಾರೆ. ಈ ಸ್ವಸಹಾಯ ಗುಂಪುಗಳು ತಮ್ಮ ಉತ್ಪನ್ನಗಳು ಹಾಗೂ ಆಹಾರ ಪದಾರ್ಥಗಳೊಂದಿಗೆ ವಿವಿಧ ರಾಜ್ಯಗಳಲ್ಲಿ ಆಯೋಜಿಸಲಾಗುವ `ಸರಸ್ ಮೇಳ’ಗಳಲ್ಲಿಯೂ ಭಾಗವಹಿಸಿ ತಮ್ಮ ಉದ್ಯಮಕ್ಕೆ ಹೆಚ್ಚಿನ ಮಾರುಕಟ್ಟೆ ಕಲ್ಪಿಸಿಕೊಂಡಿವೆ.
ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಅಕ್ಕ ಕೆಫೆ ಆರಂಭಿಸುವ ಯೋಜನೆ ರೂಪಿಸಲಾಗಿದೆ. ಇದರ ಭಾಗವಾಗಿ ಹೊನ್ನಾವರ, ಕುಮಟಾ, ಯಲ್ಲಾಪುರ ಹಾಗೂ ಶಿರಸಿ ತಾಲೂಕುಗಳಲ್ಲಿ ಅಕ್ಕ ಕೆಫೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿವೆ. ಇದರಿಂದ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮೀಣ ಮಹಿಳೆಯರಿಗೆ ಉದ್ಯಮದ ಅವಕಾಶಗಳು ಮತ್ತಷ್ಟ್ಟು ವಿಸ್ತರಿಸುವ ನಿರೀಕ್ಷೆಯಿದೆ. ಕಾರವಾರದ ವೈದ್ಯಕೀಯ ಕಾಲೇಜು ಆವರಣ ಹಾಗೂ ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿಯೂ ಅಕ್ಕ ಕೆಫೆ ಆರಂಭಿಸುವ ಉದ್ದೇಶದಿಂದ ಪ್ರಸ್ತಾವನೆಯನ್ನು ರಾಜ್ಯ ಅಭಿಯಾನ ಘಟಕಕ್ಕೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗಳು ಕಾರ್ಯರೂಪಕ್ಕೆ ಬಂದಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಆಹಾರ ಸೇವೆ ದೊರೆಯುವುದರ ಜೊತೆಗೆ ಇನ್ನಷ್ಟ್ಟು ಮಹಿಳಾ ಸ್ವಸಹಾಯ ಗುಂಪುಗಳಿಗೆ ನಿರಂತರ ಆದಾಯದ ಮೂಲ ಸೃಷ್ಟಿಯಾಗಲಿದೆ.
ಅಕ್ಕ ಕೆಫೆ ಕೇವಲ ಆಹಾರ ಮಾರಾಟದ ಕೇಂದ್ರವಾಗಿರದೇ ಗ್ರಾಮೀಣ ಮಹಿಳೆಯರ ಪರಿಶ್ರಮ, ಕೌಶಲ್ಯ ಮತ್ತು ಉದ್ಯಮಶೀಲತೆಯನ್ನು ಬೆಳೆಸುವ ವೇದಿಕೆಯಾಗಿ ರೂಪುಗೊಳ್ಳುತ್ತಿದೆ. ಸ್ವಸಹಾಯ ಗುಂಪುಗಳ ಮಹಿಳೆಯರು ಸ್ವಂತ ಆದಾಯ ಗಳಿಸಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದರ ಜೊತೆಗೆ ಸ್ಥಳೀಯ ಮಟ್ಟದಲ್ಲಿಯೇ ಉದ್ಯೋಗ ಸೃಷ್ಟಿಸುವ ಮೂಲಕ ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೂ ಕೊಡುಗೆ ನೀಡುತ್ತಿದ್ದಾರೆ. ಕಾರವಾರ ಮತ್ತು ಮುರುಡೇಶ್ವರದ ಅಕ್ಕ ಕೆಫೆಗಳು ಈಗಾಗಲೇ ಸಾಧಿಸಿರುವ ವ್ಯವಹಾರಿಕ ಯಶಸ್ಸು, ಗ್ರಾಮೀಣ ಮಹಿಳೆಯರು ಅವಕಾಶ ದೊರೆತರೆ ಉತ್ತಮ ಉದ್ಯಮಿಗಳಾಗಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿದೆ. ಎಲ್ಲ ತಾಲೂಕುಗಳಿಗೂ ಅಕ್ಕ ಕೆಫೆ ವಿಸ್ತರಣೆಯಾಗುತ್ತಿರುವುದು ಈ ಯಶಸ್ಸಿನ ಮುಂದಿನ ಹೆಜ್ಜೆಯಾಗಿದೆ. ಹೊಸ ಅಕ್ಕ ಕೆಫೆಗಳ ಮೂಲಕ ಇನ್ನಷ್ಟು ಮಹಿಳೆಯರಿಗೆ ಉದ್ಯೋಗದಿಂದ ಉದ್ಯಮದತ್ತ, ಅವಲಂಬನೆಯಿAದ ಸ್ವಾವಲಂಬನೆಯತ್ತ ಹಾಗೂ ಸಣ್ಣ ಅವಕಾಶಗಳಿಂದ ದೊಡ್ಡ ಕನಸುಗಳತ್ತ ಸಾಗುವ ಅವಕಾಶ ದೊರೆಯಲಿದೆ. ಸ್ಥಳೀಯ ಆಹಾರ, ಸ್ಥಳೀಯ ಸಂಪನ್ಮೂಲ ಮತ್ತು ಸ್ಥಳೀಯ ಮಹಿಳೆಯರ ಶ್ರಮವನ್ನು ಒಂದೆಡೆ ಸೇರಿಸುವ ಮೂಲಕ ಅಕ್ಕ ಕೆಫೆ ಗ್ರಾಮೀಣ ಆರ್ಥಿಕತೆಯಲ್ಲೂ ಹೊಸ ಚೈತನ್ಯ ಮೂಡಿಸುತ್ತಿದೆ.
ಮುಂದಿನ ದಿನಗಳಲ್ಲಿ ಅಕ್ಕ ಕೆಫೆಗಳು ಕೇವಲ ಯಶಸ್ವಿ ಆಹಾರ ಉದ್ಯಮಗಳಾಗಿ ಬೆಳೆಯುವುದಷ್ಟೇ ಅಲ್ಲದೆ, ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರ ಸ್ವಾವಲಂಬನೆಯ ಸಂಕೇತಗಳಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ. “ಮಹಿಳೆಯರ ಕೈಗೆ ಉದ್ಯೋಗ, ಉದ್ಯಮಕ್ಕೆ ಅವಕಾಶ, ಕುಟುಂಬಕ್ಕೆ ಆರ್ಥಿಕ ಭದ್ರತೆ” ಎಂಬ ಆಶಯವನ್ನು ಸಾಕಾರಗೊಳಿಸುತ್ತಿರುವ ಅಕ್ಕ ಕೆಫೆ, ಗ್ರಾಮೀಣ ಮಹಿಳಾ ಸಬಲೀಕರಣದ ಯಶೋಗಾಥೆಯಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ.