ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಬೋಟಿಂಗ್ ಸಹ ಮುಂಚೂಣಿಯಲ್ಲಿದ್ದು, ಅಪಪ್ರಚಾರದ ಪರಿಣಾಮ ಪ್ರವಾಸೋದ್ಯಮ ಚಟುವಟಿಕೆಗೆ ಹಿನ್ನಡೆಯಾಗುವ ಆತಂಕ ಎದುರಾಗಿದೆ. ಕಾನೂನುಬದ್ಧ ಅನುಮತಿ ಜೊತೆ ಬೋಟಿಂಗ್ ನಡೆಸುತ್ತಿದ್ದರೂ ಕೆಲ ರಾಜಕೀಯ ಮುಖಂಡರು ಅಪಪ್ರಚಾರದ ಮೂಲಕ ಪ್ರವಾಸೋದ್ಯಮ ಹಾಳು ಮಾಡುತ್ತಿರುವ ಬಗ್ಗೆ ಪ್ರವಾಸಿ ಬೋಟ್ ಮಾಲಕರು ಆಕ್ಷೇಪವ್ಯಕ್ತಪಡಿಸಿದ್ದಾರೆ.
`ಗೋಕರ್ಣದಲ್ಲಿ ಪ್ರವಾಸಿ ಬೋಟ್ಗಳನ್ನು ನಡೆಸುವ ಸ್ಥಳೀಯ ಮೀನುಗಾರರಿಗೆ ನಿರಪೇಕ್ಷಣಾ ಪತ್ರ ನೀಡದೇ ಸತಾಯಿಸಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಪ್ರದೀಪ ನಾಯಕ ಅವರು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಬೋಟ್ ಮಾಲಕರು ಪ್ರತಿಕ್ರಿಯೆ ನೀಡಿದ್ದು, `ಸಮಯಕ್ಕೆ ಸರಿಯಾಗಿ ದಾಖಲೆ ನೀಡಿದ ಎಲ್ಲರಿಗೂ ನಿರಪೇಕ್ಷಣಾ ಪತ್ರ ಸಿಕ್ಕಿದೆ. ಅವರ ಆರೋಪದಲ್ಲಿ ಸತ್ಯಾಂಶವಿಲ್ಲ’ ಎಂದು ಹೇಳಿದ್ದಾರೆ. `ತದಡಿ ಮತ್ತು ಮುಡಂಗಿ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ನಿಯಮಗಳಂತೆ ಅಗತ್ಯ ಅನುಮತಿ ಪಡೆದು ಕಾನೂನುಬದ್ಧವಾಗಿ ಪ್ರವಾಸಿ ಬೋಟಿಂಗ್ ನಡೆಸಲಾಗುತ್ತಿದೆ. ಆದರೆ, ಕೆಲ ರಾಜಕೀಯ ಮುಖಂಡರು ಅನಗತ್ಯ ಆರೋಪ ಮತ್ತು ಅಪಪ್ರಚಾರ ಮಾಡುವ ಮೂಲಕ ಸುಗಮವಾಗಿ ನಡೆಯುತ್ತಿರುವ ಪ್ರವಾಸೋದ್ಯಮದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ತದಡಿ ಮತ್ತು ಮುಡಂಗಿ ಪ್ರವಾಸಿ ಬೋಟ್ ಮಾಲೀಕರಾದ ಗೋಕರ್ಣ ಓಶಿಯನ್ ಎಡ್ವೆಂಚರಿನ ದಿಲೀಪ್ ನಾಯ್ಕ ಅವರು ದೂರಿದ್ದಾರೆ.
ಸನ್ ಶೈನ್ ಎಡ್ವೆಂಚರ್ ನ ಮಹೇಶ ಮುಡಂಗಿ, ಗೋಲ್ಡನ್ ಫಾಕ್ಸ್ ನ ಸಂದೀಪ್ ಮುದುಗೇಕರ್, ಅಮೇಜಿಂಗ್ ಗ್ರೇಸ್ ನ ಗಣೇಶ ಮುಡಂಗಿ, ನ್ಯೂ ಸೀ ಲೈನ್ ನ ಪ್ರಶಾಂತ ಜಟ್ಟಿ ಹರಿಕಂತ್ರ, ಮೊನ್ಸ್ಟರ್ ವಾಟರ್ ಸ್ಪೋಡ್ಸ್ ನ ರಾಜೇಶ್ ಹೊಸ್ಕಟ್ಟ, ಪೊಸಿಡನ್ ನ ಉಮಾಕಾಂತ ಮುಡಂಗಿ, ರಾಯಲ್ ಕ್ರೂಸ್ ನ ಸತೀಶ್ ಪಿರಿನಕರ್, ಎವರ್ ಗ್ರೀನ್ ಎಡ್ವೆಂಚರ್ ನ ಆನಂದು ಹರಿಕಾಂತ, ಫಿನಿಕ್ಸ್ನ ನಿತ್ಯಾನಂದ ಹರಿಕಾಂತ ಅವರು ಈ ಕುರಿತು ಮಾತನಾಡಿದ್ದು, `ಪ್ರವಾಸಿ ಬೋಟ್ ಮಾಲೀಕರು, ಪ್ರವಾಸೋದ್ಯಮ ಇಲಾಖೆಯ ನಿರ್ದೇಶನದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸಂಬAಧಪಟ್ಟ ಇಲಾಖೆಗಳ ಅನುಮತಿ ಪಡೆದೇ ಬೋಟಿಂಗ್ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. `ಜಿಲ್ಲಾಡಳಿತ ನಿಗದಿಪಡಿಸಿದ ವಿಮಾ ಪತ್ರ, ಸ್ಥಳೀಯ ಗ್ರಾಮ ಪಂಚಾಯಿತಿಯ ನಿರಾಕ್ಷೇಪಣಾ ಪತ್ರ, ಬಂದರು ಇಲಾಖೆಯ ನಿರಾಕ್ಷೇಪಣಾ ಪತ್ರ, ಬೋಟ್ ನೋಂದಣಿ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿದೆ. ಹೀಗಾಗಿ, ನಿಯಮಾನುಸಾರ ಅನುಮತಿ ಪಡೆದು ಬೋಟಿಂಗ್ ನಡೆಸುತ್ತಿರುವ ನಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ’ ಎಂದು ಅವರು ತಿಳಿಸಿದ್ದಾರೆ.
`ತದಡಿ ಮತ್ತು ಮುಡಂಗಿ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಇಲಾಖೆ ನಿಗದಿಪಡಿಸಿದಂತೆ ಕೇವಲ 20 ಪ್ರವಾಸಿ ಬೋಟ್ಗಳಿಗೆ ಮಾತ್ರ ಅನುಮತಿ ಪಡೆಯಲು ಅವಕಾಶವಿತ್ತು. ಅದರಂತೆ, ನಿಗದಿತ ದಾಖಲೆಗಳನ್ನು ಸಲ್ಲಿಸಿದವರಿಗೆ ಅನುಮತಿ ದೊರೆತಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಹಣಕಾಸಿನ ವ್ಯವಹಾರ ನಡೆದಿಲ್ಲ’ ಎಂದು ಬೋಟ್ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ. `ನಿಗದಿತ ಅವಧಿಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಲು ವಿಫಲರಾದ ಕೆಲವರು ಇದೀಗ ವಿನಾಕಾರಣ ಆರೋಪಗಳನ್ನು ಮಾಡುತ್ತಿದ್ದು, ಇದರಿಂದ ಪ್ರವಾಸೋದ್ಯಮದ ಬೆಳವಣಿಗೆಗೆ ಹಾನಿಯಾಗುವ ಆತಂಕವಿದೆ. ಜಿಲ್ಲಾಡಳಿತದ ನಿರ್ದೇಶನದಂತೆ ಅನುಮತಿ ಪಡೆದು ಕಾರ್ಯನಿರ್ವಹಿಸುತ್ತಿರುವ ನಮಗೆ ಪ್ರವಾಸಿಗರ ಸುರಕ್ಷತೆಯೇ ಮೊದಲ ಆದ್ಯತೆಯಾಗಿದೆ’ ಎಂದು ಅವರು ಹೇಳಿದ್ದಾರೆ.