ಶಿರಸಿ ಹಾಗೂ ಯಲ್ಲಾಪುರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಕ್ರಮ ಗೋವು ಸಾಗಾಟ ಹಾಗೂ ಗೋಮಾಂಸ ಸಾಗಾಟ ಮಾಡುವವರ ಹೆಡೆಮುರಿ ಕಟ್ಟಿದ್ದಾರೆ. ಶಿರಸಿಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಗೋಮಾಂಸ ಸಿಕ್ಕಿಬಿದ್ದಿದೆ. ಯಲ್ಲಾಪುರದಲ್ಲಿ ಹಿಂಸಾತ್ಮಕವಾಗಿ ಸಾಗಾಟವಾಗುತ್ತಿದ್ದ ಜಾನುವಾರುಗಳಿಗೆ ಮರು ಜನ್ಮ ದೊರೆತಿದೆ.
ಶಿರಸಿ ನಗರದ ಮುಸ್ಲಿಂ ಗಲ್ಲಿಯಲ್ಲಿ ಗೋಮಾಂಸ ಸಾಗಾಟವಾಗುತ್ತಿರುವ ಮಾಹಿತಿ ಆಧರಿಸಿ ಶಿರಸಿ ಹೊಸಮಾರುಕಟ್ಟೆ ಠಾಣೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಐಷಾರಾಮಿ ಕ್ರೇಟಾ ಕಾರಿನಲ್ಲಿ ಸಾಗಿಸುತ್ತಿದ್ದ 57 ಕೆಜಿ ಮಾಂಸವನ್ನು ಅವರು ವಶಕ್ಕೆಪಡೆದಿದ್ದಾರೆ. ಸಿಪಿಐ ಸಂಪತ್ ಅವರ ನೇತ್ರತ್ವದಲ್ಲಿ ಈ ದಾಳಿ ನಡೆದಿದೆ. ದಾಳಿ ವೇಳೆ ಇಬ್ಬರು ಸಿಕ್ಕಿಬಿದ್ದಿದ್ದು, ಉಳಿದವರ ಶೋಧ ನಡೆಯುತ್ತಿದೆ. ತಪ್ಪಿಸಿಕೊಂಡವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.
ಅಶೋಕ ಲೈಲ್ಯಾಂಡ್ ಲಾರಿಯಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ದುಷ್ಟರು ಯಲ್ಲಾಪುರದಲ್ಲಿ ಸಿಕ್ಕಿಬಿದ್ದಿದ್ದಾರೆ. ಕಲಘಟಗಿಯ ಗಾಂಧಿನಗರದ ಕಿಮ್ಸ್ ಆಸ್ಪತ್ರೆ ರಸ್ತೆ ನಿವಾಸಿ, ವಾಹನ ಚಾಲಕ ಮಂಜುನಾಥ ಸೋಮಯ್ಯ ರುದ್ರಾಕ್ಷಿ (39) ಹಾಗೂ ಕಲಘಟಗಿಯ ಬಸ್ ನಿಲ್ದಾಣದ ಹಿಂಭಾಗದ ಚರ್ಚ್ ರಸ್ತೆ ನಿವಾಸಿ ಅಲ್ತಾಫ್ ಹಜರೇಸಾಬ ಉಡೇಕರ (35) ಅವರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಅಂಕೋಲಾದಿ0ದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಲಾರಿ ತಪಾಸಣೆ ಮಾಡಿದ ಯಲ್ಲಾಪುರ ಪೊಲೀಸರಿಗೆ ಜಾನುವಾರುಗಳ ಸಾಗಾಟದ ಬಗ್ಗೆ ಗೊತ್ತಾಗಿದೆ. ಪಿಸೈ ರಾಜಶೇಖರ ವಂದಲಿ ಅವರು ಮೂರು ಜಾನುವಾರುಗಳ ಜೀವ ಕಾಪಾಡಿದ್ದಾರೆ.