ಕಾಳಿ ನದಿ ಬಗೆದ ದುಷ್ಟರು ಅಕ್ರಮವಾಗಿ ಅಲ್ಲಿದ್ದ ಮರಳು ತೆಗೆಯುತ್ತಿದ್ದು, ಅಲ್ಲಿದ್ದ ಜನ ಅದನ್ನು ತಡೆದಿದ್ದಾರೆ. ಆದರೆ, ರಾಜಕೀಯ ಒತ್ತಡಕ್ಕೆ ಸಿಲುಕಿದ ಅಧಿಕಾರಿಗಳು ಜನ ದೂರು ನೀಡಿದರೂ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬಂದಿಲ್ಲ. ಹೀಗಾಗಿ, ದೋಣಿಯಲ್ಲಿ ಮರಳು ತಂದಿದ್ದ ದಂಧೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ.
ಕಾಳಿ ನದಿ ತೀರದಲ್ಲಿ ಅಕ್ರಮವಾಗಿ ಮರಳು ತೆಗೆದು ಬೇರೆ ರಾಜ್ಯಕ್ಕೆ ರವಾನಿಸಲಾಗುತ್ತಿದೆ ಎಂಬ ಆರೋಪವಿದೆ. ಈ ಕುರಿತು ಪ್ರಜಾ ಸೇವೆ ಸಭೆಯಲ್ಲಿಯೂ ಜಿಲ್ಲಾಡಳಿತಕ್ಕೆ ದೂರು ಸಲ್ಲಿಕೆಯಾಗಿದೆ. ದೂರಿನ ನಂತರ ಒಮ್ಮೆ ಮಾತ್ರ ಅಧಿಕಾರಿಗಳು ದಾಳಿ ನಡೆಸಿ ಕೆಲ ಪ್ರಮಾಣದ ಮರಳು ಜಪ್ತು ಮಾಡಿದ್ದಾರೆ. ಆದರೆ, ಅದಾದ ನಂತರವೂ ಮರಳುಗಾರಿಕೆ ಹಾಗೇ ಮುಂದುವರೆದಿದೆ. ಈ ದಿನವೂ ದೋಣಿಯಲ್ಲಿ ಮರಳು ತೆಗೆದು ದಡಕ್ಕೆ ತಂದಿದ್ದು, ಅದನ್ನು ನೋಡಿದ ಜನ ಅಧಿಕಾರಿಗಳಿಗೆ ಫೋನ್ ಮಾಡಿದ್ದಾರೆ. ಈ ವೇಳೆ ಆ ಅಧಿಕಾರಿಗಳಿಗೆ ಪ್ರಭಾವಿ ರಾಜಕಾರಣಿಯೊಬ್ಬರ ಒತ್ತಡ ಬಂದಿದ್ದು, ಆರೋಪಿತರು ಅಲ್ಲಿಂದ ಪರಾರಿಯಾದ ನಂತರ ಅಧಿಕಾರಿಗಳು ಸ್ಥಳ ಭೇಟಿ ಮಾಡಿದ್ದಾರೆ.
ಅದಾಗಿಯೂ, ಅಲ್ಲಿದ್ದ ಜನ ದೋಣಿಯಲ್ಲಿ ರೇತಿ ತುಂಬಿದ್ದ ಫೋಟೋ ಮಾಡಿದ್ದಾರೆ. ಜಿಪಿಎಸ್ ಆಧಾರಿತ ಫೋಟೋಗಳನ್ನು ಅಧಿಕಾರಿಗಳಿಗೆ ಕಳುಹಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕಾರವಾರದ ಹೋಟೆಗಾಳಿ ಪ್ರದೇಶದ ಕಾಳಿ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ಮುಂದುವರೆದಿದ್ದು, ಈ ದಿನ ದಂಧೆಕೋರರಿಗೆ ನಷ್ಟವಾಗಿದೆ. ತಡವಾಗಿಯಾದರೂ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮರಳನ್ನು ವಶಕ್ಕೆಪಡೆದಿದ್ದಾರೆ. ದೋಣಿಯನ್ನು ಬಿಟ್ಟು ಕಳುಹಿಸಿದ್ದಾರೆ. ಆ ದೋಣಿ ಯಾರಿಗೆ ಸೇರಿದ್ದು? ಒತ್ತಡ ಹಾಕಿದ ರಾಜಕಾರಣಿ ಯಾರು? ಎಂದು ಜನ ಪ್ರಶ್ನಿಸುತ್ತಿದ್ದಾರೆ.