ಕುಮಟಾದ ದಿವಗಿ ಹೈಸ್ಕೂಲು ಬಳಿ ನಡೆದ ಅಪಘಾತದಲ್ಲಿ ಹೊನ್ನಾವರದ ಮಹಿಳೆಯೊಬ್ಬರು ಸಾವನಪ್ಪಿದ್ದಾರೆ. ಬೈಕಿನಿಂದ ಹಾರಿ ಗಾಯಮಾಡಿಕೊಂಡಿದ್ದ ಮಹಿಳೆಯನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರೂ ಪ್ರಯೋಜನ ಆಗಿಲ್ಲ.
ಹೊನ್ನಾವರ ಹಳದಿಪುರದ ಸಾಲಕೇರಿಯಲ್ಲಿ ರಾಮ ಮಾಸ್ತಿ ಗೌಡ ಅವರು ವಾಸವಾಗಿದ್ದಾರೆ. ಅವರ ಜೊತೆ ಅವರ ಪತ್ನಿ ಲಕ್ಷಿ ಗೌಡ ಅವರು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಅಕ್ಟೊಬರ್ 9ರಂದು ಲಕ್ಷಿ ಗೌಡ ಅವರು ಕೆಲಸಕ್ಕಾಗಿ ಕುಮಟಾಗೆ ಹೋಗಿದ್ದು, ಮರಳಿ ಬರುವಾಗ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಬೈಕಿನಿಂದ ರಸ್ತೆ ಮೇಲೆ ಬಿದ್ದ ಅವರಿಗೆ ತಕ್ಷಣ ಚಿಕಿತ್ಸೆ ಕೊಡಿಸಿದರೂ ಜೀವ ಉಳಿಸಲು ಸಾಧ್ಯವಾಗಿಲ್ಲ. ಉನ್ನತ ಚಿಕಿತ್ಸೆಗಾಗಿ ನೆರೆ ಜಿಲ್ಲೆಗೆ ಕರೆದೊಯ್ಯುವ ಪ್ರಯತ್ನವೂ ಫಲ ಕೊಡಲಿಲ್ಲ.
ಕುಮಟಾ ಕತಗಾಲ ಬೈಲಗದ್ದೆಯ ಮಾಬ್ಲು ತಿಮ್ಮಣ್ಣ ಗೌಡ ಅವರು ಆ ದಿನ ಲಕ್ಷಿ ಗೌಡ ಅವರನ್ನು ಬೈಕಿನಲ್ಲಿ ಕೂರಿಸಿಕೊಂಡು ಹೊರಟಿದ್ದರು. ಬೈಲಗದ್ದೆಯಿಂದ ಕುಮಟಾ ಕಡೆ ಹೊರಟ ಬೈಕು ದಿವಗಿ ಬಳಿ ಜೋರಾಗಿ ಸಂಚರಿಸುತ್ತಿತ್ತು. ಆಗ ಅಲ್ಲಿ ಒಮ್ಮೆಲೆ ದನ ಅಡ್ಡ ಬಂದಿದ್ದು, ಮಾಬ್ಲು ಗೌಡ ಅವರು ದಿಢೀರ್ ಆಗಿ ಬೈಕಿನ ಬ್ರೆಕ್ ಅದುಮಿದರು. ಆಗ, ಲಕ್ಷಿ ಗೌಡ ಅವರು ಬೈಕಿನಿಂದ ಹಾರಿ ಬಿದ್ದರು. ಗಂಭೀರ ಗಾಯಗೊಂಡ ಲಕ್ಷಿ ಗೌಡ ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರದ ಆದರ್ಶ ಆಸ್ಪತ್ರೆಗೆ ಸಾಗಿಸುವಾಗ ಅವರು ಸಾವನಪ್ಪಿದರು.