ಗಾಂಧೀನಗರದ ರಾಘವೇಂದ್ರ ಕಲ್ಲಕುಟ್ರ ಅವರು ಶಿರಸಿ ಶಿರಸಿ ಮಣಿಪುರಂ ಫೈನಾನ್ಸಿ’ನಲ್ಲಿ ಚಿನ್ನ ಅಡವಿಟ್ಟು ಸಾಲಪಡೆದಿದ್ದು, ಬಡ್ಡಿಸಹಿತ ಸಾಲ ಮರುಪಾವತಿ ಮಾಡಿದರೂ ಅವರ ಚಿನ್ನ ಮರಳಿ ಸಿಕ್ಕಿಲ್ಲ. ಅಸಲು ಹಾಗೂ ಬಡ್ಡಿ ತೀರಿದ ನಂತರವೂ ಮಣಿಪುರಂ ಫೈನಾನ್ಸಿನ ಮ್ಯಾನೇಜರ್ ಅರ್ಪಿತಾ ನಾಯ್ಕ ಅವರು ಚಿನ್ನ ಬಿಟ್ಟು ಕೊಡಲು ಸಿದ್ಧರಿಲ್ಲ.
ಶಿರಸಿಯ ಗಾಂಧೀನಗರದಲ್ಲಿ ರಾಘವೇಂದ್ರ ಕಲ್ಲಕುಟ್ರ ಅವರು ವಾಸವಾಗಿದ್ದಾರೆ. ತುರ್ತು ಹಣಕಾಸು ಅಡಚಣೆ ಹಿನ್ನಲೆ ಅವರು ಮಣಿಪುರಂ ಗೋಲ್ಡ್’ನ ಮೊರೆ ಹೋಗಿದ್ದಾರೆ. ಹೊಸಪೇಟೆ ರಸ್ತೆಯಲ್ಲಿರುವ ಮಣಿಪುರಂ ಫೈನಾನ್ಸಿಗೆ ಹೋದ ಅವರು ಅಲ್ಲಿ ತಮ್ಮ ಚೈನು, ನೆಕ್ಲೇಸ್, ಬಂಗಾರದ ಹಾರ ಅಡವಿಟ್ಟಿದ್ದಾರೆ. ಅದಾದ ನಂತರ ವಿವಿಧ ದಾಖಲೆಗಳನ್ನು ಸಲ್ಲಿಸಿ 7.80 ಲಕ್ಷ ರೂ ಸಾಲ ಮಾಡಿದ್ದಾರೆ. ಆ ಸಾಲಕ್ಕೆ ಸಂಬAಧಿಸಿ ಅವರು ಆಗಾಗ ಅಸಲು ಹಾಗೂ ಬಡ್ಡಿ ಪಾವತಿ ಮಾಡಿದ್ದಾರೆ.
ಈ ನಡುವೆ ಅಕ್ಟೊಬರ್ 5ರಂದು ರಾಘವೇಂದ್ರ ಕಲ್ಲಕುಟ್ರ ಅವರು ಮಣಿಪುರಂ ಗೋಲ್ಡ್’ನ ಮ್ಯಾನೇಜರ್ ಅರ್ಪಿತಾ ನಾಯ್ಕ ಅವರನ್ನು ಭೇಟಿ ಮಾಡಿದ್ದಾರೆ. `ಎಲ್ಲಾ ಸಾಲವನ್ನು ಒಟ್ಟಿಗೆ ತೀರಿಸಿ, ಚಿನ್ನ ಮರಳಿಪಡೆಯುವೆ’ ಎಂದವರು ಹೇಳಿದ್ದಾರೆ. ಆಗ, ಅರ್ಪಿತಾ ನಾಯ್ಕ ಅವರು ತಲೆಯಾಡಿಸಿದ್ದು, `ಅಕ್ಟೊಬರ್ 8ರ ಒಳಗೆ ಪಾವತಿಸಿದರೆ ಮಾತ್ರ ಚಿನ್ನ ಕೊಡುವೆ’ ಎಂದಿದ್ದಾರೆ. ಅರ್ಪಿತಾ ನಾಯ್ಕ ಅವರ ಮಾತಿನ ಮೇಲೆ ಭರವಸೆಯಿಟ್ಟ ರಾಘವೇಂದ್ರ ಕಲ್ಲಕುಟ್ರ ಅವರು ತರಾತುರಿಯಲ್ಲಿ ಇನ್ನೊಂದು ಕಡೆ ಸಾಲ ಮಾಡಿದ್ದಾರೆ. ಅವರಿವರ ಬಳಿ ಕೈಗಡಪಡೆದು ಅದನ್ನು ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ಅಕ್ಟೊಬರ್ 8ರ ಸಂಜೆ 5 ಗಂಟೆಯ ಒಳಗೆ ಆ 8.91 ಲಕ್ಷ ರೂಪಾಯಿಯನ್ನು ಮಣಿಪುರಂ ಗೋಲ್ಡ್’ನವರ ಖಾತೆಗೆ ವರ್ಗಾಯಿಸಿದ್ದಾರೆ.
ಅದಾದ ನಂತರ ಅವರು ಮತ್ತೆ ಮಣಿಪುರಂ ಗೋಲ್ಡ್ ಕಚೇರಿಗೆ ಹೋಗಿದ್ದು, `ಎಲ್ಲಾ ಹಣ ಪಾವತಿಸಿರುವೆ’ ಎಂದಿದ್ದಾರೆ. `ತಮ್ಮ ಬಂಗಾರ ಮರಳಿಸಿ’ ಎಂದು ಮನವಿ ಮಾಡಿದ್ದಾರೆ. ಆಗ, ಅರ್ಪಿತಾ ನಾಯ್ಕ ಅವರು `ನಾಳೆ ಬನ್ನಿ’ ಎಂದಿದ್ದಾರೆ. ಅದರಂತೆ, ರಾಘವೇಂದ್ರ ಕಲ್ಲಕುಟ್ರ ಅವರು ಅಕ್ಟೊಬರ್ ಮತ್ತೆ ಮಣಿಪುರಂ ಗೋಲ್ಡ್’ನ ಕಚೇರಿಗೆ ಹೋಗಿದ್ದಾರೆ. ಆಗ, ಅರ್ಪಿತಾ ನಾಯ್ಕ ಅವರು ಉಲ್ಟಾ ಹೊಡೆದಿದ್ದಾರೆ. `ಬಂಗಾರ ಕೊಡುವುದಿಲ್ಲ’ ಎಂದು ಅವರು ಹೇಳಿದ್ದು, ಅದನ್ನು ಕೇಳಿ ರಾಘವೇಂದ್ರ ಕಲ್ಲಕುಟ್ರ ಅವರು ಆಘಾತಕ್ಕೆ ಒಳಗಾಗಿದ್ದಾರೆ. `ಬಂಗಾರ ಕೊಡದ ವಿಷಯ ರಿಜಿನಲ್ ಮ್ಯಾನೇಜರ್ ಬಳಿ ಹೇಳುವೆ’ ಎಂದು ರಾಘವೇಂದ್ರ ಕಲ್ಲಕುಟ್ರ ಅವರು ದಬಾಯಿಸಿದ್ದಾರೆ. `ರಿಜಿನಲ್ ಮ್ಯಾನೇಜರ್ ಅವರ ಸೂಚನೆ ಮೇರೆಗೆ ನಾನು ಹೀಗೆ ಮಾಡಿದ್ದೇನೆ’ ಎಂದು ಅರ್ಪಿತಾ ನಾಯ್ಕ ಅವರು ಹೇಳಿದ್ದಾರೆ. ಮಣಿಪುರಂ ಗೋಲ್ಡನಲ್ಲಿ ಅಡವಿರಿಸಿದ್ದ ಬಂಗಾರಪಡೆಯಲು ಅವರಿವರ ಬಳಿ ಸಾಲ ಮಾಡಿದ್ದ ರಾಘವೇಂದ್ರ ಕಲ್ಲಕುಟ್ರ ಅವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.