ಹಿಲ್ಲೂರಿನ ನಾಗೇಶ ನಾಯಕ ಅವರ ಟಾಟಾ ಇಂಡಿಕಾ ಕಾರನ್ನು ಅದೇ ಭಾಗದ ಆರೀಪ್ ಸಾಬ್ ಅವರು ಅಪಹರಿಸಿದ್ದಾರೆ. `ಒಂದು ದಿನದ ಮಟ್ಟಿಗೆ ಕಾರು ಕೊಡು’ ಎಂದು ಕೇಳಿ ತೆಗೆದುಕೊಂಡು ಹೋಗಿದ್ದ ಆರೀಪ್ ಸಾಬ್ ಅವರು ಐದು ದಿನವಾದರೂ ಕಾರು ಮರಳಿಸಿಲ್ಲ.
ಅಂಕೋಲಾ ಹಿಲ್ಲೂರಿನ ಪುಡುಗೇರಿಯಲ್ಲಿ ನಾಗೇಶ ರಮಾನಂದ ನಾಯಕ ಅವರು ವಾಸವಾಗಿದ್ದಾರೆ. 37ವರ್ಷದ ಅವರು ಚಾಲಕರಾಗಿ ಕೆಲಸ ಮಾಡಿಕೊಂಡಿದ್ದಾರೆ. ಹಿಲ್ಲೂರು ಮುಖ್ಯರಸ್ತೆ ಬದಿಯಲ್ಲಿ ಆರೀಪ್ ರಶೀದ್ ಸಾಬ್ ಅವರು ವಾಸವಾಗಿದ್ದಾರೆ. ಹೀಗಿರುವಾಗ ಅಕ್ಟೊಬರ್ 9ರಂದು ಸಂಜೆ ಆರೀಪ್ ಸಾಬ್ ಅವರು ನಾಗೇಶ ನಾಯಕ ಅವರ ಬಳಿ `ಒಂದು ದಿನದ ಮಟ್ಟಿಗೆ ಕಾರ್ ಬೇಕಿತ್ತು’ ಎಂದು ಹೇಳಿದ್ದಾರೆ. ಆರೀಪ್ ಸಾಬ್ ಸಹ ಪರಿಚಯದವರೇ ಆಗಿದ್ದರಿಂದ ನಾಗೇಶ ನಾಯಕ ಅವರು ಕಾರು ಕೊಟ್ಟು ಕಳುಹಿಸಿದ್ದಾರೆ.
ಆದರೆ, ಒಂದು ದಿನದ ಮಟ್ಟಿಗೆ ಕಾರು ತೆಗೆದುಕೊಂಡು ಹೋಗಿದ್ದ ಆರೀಪ್ ಸಾಬ್ ಐದು ದಿನವಾದರೂ ಮರಳಿ ಬಂದಿಲ್ಲ. ಫೋನ್ ಮಾಡಿದರೂ ಅವರ ಸಂಪರ್ಕ ಸಾಧ್ಯವಾಗುತ್ತಿಲ್ಲ. ಆರೀಪ್ ಸಾಬ್ ಅವರ ಫೋನ್ ಸ್ವಿಚ್ ಆಫ್ ಆಗಿರುವುದನ್ನು ಅರಿತ ನಾಗೇಶ ನಾಯಕ ಅವರು ಆತಂಕಕ್ಕೆ ಒಳಗಾಗಿದ್ದು, ಎಲ್ಲಡೆ ತಮ್ಮ ಕಾರು ಹುಡುಕಿದ್ದಾರೆ. ಅದರಿಂದ ಯಾವ ಪ್ರಯೋಜನವೂ ಆಗಿಲ್ಲ. ಅದಾದ ನಂತರ ಮೋಸ ಮಾಡುವ ಉದ್ದೇಶದಿಂದಲೇ ಆರೀಪ್ ಸಾಬ್ ಅವರು ಕಾರು ಕೊಂಡೊಯ್ದ ಬಗ್ಗೆ ನಾಗೇಶ ನಾಯಕ ಅವರಿಗೆ ಗೊತ್ತಾಗಿದೆ.
ಕಾರು ಕೊಂಡೊಯ್ದ ಆರೀಬ್ ಸಾಬ್ ಅವರ ವಿರುದ್ಧ ಕ್ರಮ ಜರುಗಿಸುವಂತೆ ನಾಗೇಶ ನಾಯಕ ಅವರು ಪೊಲೀಸ್ ದೂರು ನೀಡಿದ್ದಾರೆ. ಅಂಕೋಲಾ ಪೊಲೀಸರು ಕೇಸು ದಾಖಲಿಸಿದ್ದು, ಕಾರಿನ ಶೋಧ ಶುರು ಮಾಡಿದ್ದಾರೆ.