ಹಬ್ಬುವಾಡದ ದಿನಕರ ಗುನಗಿ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು, ಇದನ್ನು ಅರಿತ ಕಳ್ಳರು ಅವರ ಮನೆಗೆ ನುಗ್ಗಿದ್ದಾರೆ. ಅವರ ಮನೆಯಲ್ಲಿದ್ದ ಬೆಳ್ಳಿ-ಬಂಗಾರವನ್ನು ದೋಚಿ ಪರಾರಿಯಾಗಿದ್ದಾರೆ.
ಕಾರವಾರದ ಹಬ್ಬುವಾಡದ ಇಸ್ಕಾನ್ ದೇಗುಲ ಹಿಂದೆ ದಿನಕರ ಪುಂಡಳಿಕ ಗುನಗಿ ಅವರು ವಾಸವಾಗಿದ್ದಾರೆ. 62 ವರ್ಷದ ಅವರು ವ್ಯವಹಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅನಾರೋಗ್ಯದ ಹಿನ್ನಲೆ ಅವರು ಚಿಕಿತ್ಸೆಪಡೆಯುವುದಕ್ಕಾಗಿ ಬೆಂಗಳೂರಿಗೆ ಹೋಗಿದ್ದಾರೆ. ಮನೆಗೆ ಬೀಗ ಹಾಕಿ ಪುತ್ರನ ಜೊತೆ ಅವರು ಬೆಂಗಳೂರಿಗೆ ಹೋಗಿದ್ದಾರೆ. ಈ ವೇಳೆಯಲ್ಲಿಯೇ ಕಳ್ಳರು ದಿನಕರ ಗುನಗಿ ಅವರ ಮನೆಗೆ ನುಗ್ಗಿದ್ದಾರೆ.
ಅಕ್ಟೊಬರ್ 14ರಂದು ದಿನಕರ ಗುನಗಿ ಅವರ ಮನೆಗೆ ಕಳ್ಳರು ಬಂದಿದ್ದಾರೆ. ಮನೆಯಲ್ಲಿದ್ದ ಚಿನ್ನ-ಬೆಳ್ಳಿಯನ್ನು ಅವರು ಕದ್ದಿದ್ದಾರೆ. 3 ಲಕ್ಷ ರೂ ಮೌಲ್ಯದ ಚೈನು, 8 ಗ್ರಾಂ ತೂಕದ ಉಂಗುರದ ಜೊತೆ ಬೆಳ್ಳಿ ಲೋಟ-ಬಟ್ಟಲು ಸೇರಿ 4.5 ಲಕ್ಷ ರೂ ಮೌಲ್ಯದ ಸಾಮಗ್ರಿ ದೋಚಿದ್ದಾರೆ. ಅಕ್ಟೊಬರ್ 15ರಂದು ದಿನಕರ ಗುನಗಿ ಅವರ ಮಗ ಸಿಸಿ ಕ್ಯಾಮರಾ ನೋಡಿದ್ದಾರೆ. ಆಗ, ಅವರ ಮನೆಯಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಕೂಡಲೇ ಅವರು ಚಿಕ್ಕಪ್ಪ ರಾಜು ಗುನಗಿ ಅವರಿಗೆ ಫೋನ್ ಮಾಡಿದ್ದಾರೆ.
ರಾಜು ಗುನಗಿ ಅವರು ಅಣ್ಣನ ಮನೆ ಬಳಿ ಹೋದಾಗ ಮನೆಯ ಬಾಗಿಲು ಒಡೆದಿರುವುದು ಕಾಣಿಸಿದೆ. ಕಳ್ಳತನವಾಗಿರುವುದನ್ನು ಅವರು ದಿನಕರ ಗುನಗಿ ಅವರಿಗೆ ತಿಳಿಸಿದ್ದು, ಅವರ ಸಲಹೆ ಮೇರೆಗೆ ಕಳ್ಳರ ಪತ್ತೆಗೆ ಪೊಲೀಸರ ಸಹಾಯ ಕೇಳಿದ್ದಾರೆ. ಸದ್ಯ ಪೊಲೀಸರು ಆ ಅಪರಿಚಿತ ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ.
`ಮನೆ ಮನೆಗೂ ಸಿಸಿ ಕ್ಯಾಮರಾ ಹಾಕಿಸಿ. ಕಳ್ಳತನ ತಡೆಗೆ ಕೈ ಜೋಡಿಸಿ’