ಉಂಚಳ್ಳಿಯಲ್ಲಿ ವಾಸವಾಗಿರುವ ತಾರಾಮತಿ ನಾಯಕ ಅವರ ಕೊರಳಿನಲ್ಲಿದ್ದ ಸರ ಕದ್ದು ಪರಾರಿಯಾಗಿದ್ದ ಸೈಯ್ಯದ್ ಇಮ್ರಾನ್ ಅವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ದರೋಡೆ ನಂತರ ಆಂದ್ರಪ್ರದೇಶಕ್ಕೆ ಹೋಗಿ ಅಡಗಿದ್ದ ಸೈಯ್ಯದ್ ಇಮ್ರಾನ್ ಅವರನ್ನು ಪಿಐ ಸಂಪತ್ ಅವರ ತಂಡ ಚಾಣಾಕ್ಷತನದಿಂದ ಹಿಡಿದಿದೆ.
ಶಿರಸಿ ದುಂಡಶಿ ನಗರ ರಸ್ತೆಯ ಮುಸ್ಲಿಂ ಗಲ್ಲಿ ಸಮೀಪ ಅಕ್ಟೊಬರ್ 8ರ ಬೆಳಗ್ಗೆ 8.20ಕ್ಕೆ ಬೈಕಿನಲ್ಲಿ ಬಂದ ವ್ಯಕ್ತಿಗಳಿಬ್ಬರು ದರೋಡೆಗಿಳಿದಿದ್ದರು. ಶಿರಗುಂಜಿ ಮೂಲದ ತಾರಾಮತಿ ಈಶ್ವರ ನಾಯಕ ಅವರು ಒಂಟಿಯಾಗಿ ನಡೆದು ಹೋಗುತ್ತಿರುವುದನ್ನು ನೋಡಿದ ದುಷ್ಟರು ಅವರ ಕೊರಳಿನಲ್ಲಿದ್ದ ಸರ ಎಗರಿಸಿ ಪರಾರಿಯಾಗಿದ್ದರು. ಕಪ್ಪು ಬಣ್ಣದ ಮೋಟಾರ್ ಸೈಕಲ್ನಲ್ಲಿ ಕಳ್ಳರು ಬಂದಿರುವುದನ್ನು ಮಾತ್ರ ಗಮನಿಸಿದ ತಾರಾಮತಿ ನಾಯಕ ಅವರು ಅದೇ ವಿಷಯವನ್ನು ಪೊಲೀಸರ ಬಳಿ ಹೇಳಿದ್ದರು. ಕೇಸು ದಾಖಲಿಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದರು.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಅದೇ ದಿನ ಕಳ್ಳತನದ ವರದಿ ಸ್ವೀಕರಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ್ ಹಾಗೂ ಶಿರಸಿ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಅವರ ಬಳಿ ಚರ್ಚಿಸಿ ವಿಶೇಷ ತಂಡ ರಚಿಸಿದರು. ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಬಸವರಾಜ ಕನಶೆಟ್ಟಿ, ಗೀತಾ ಜಿ ಕಲಘಟಗಿ, ನರಸಿಂಹಲು ಅವರಿಗೆ ಪ್ರಕರಣದ ಜವಾಬ್ದಾರಿ ನೀಡಿದರು. ಅಪರಾಧ ವಿಭಾಗದ ಸಿಬ್ಬಂದಿ ಕೋಟೇಶ ನಾಗರವಳ್ಳಿ, ಸಂದೀಪ ನಿಂಬಾಯಿ, ಅರುಣ ಎಲ್ ಎಂ, ರಾಕೇಶ ಎನ್ ಎಚ್, ಬಸವರಾಜ ಹಗೇರಿ, ಹನುಮಂತ ಮಂಕಾಪುರ, ರಾಮಯ್ಯ ಪೂಜಾರಿ, ಲಕ್ಷಣ, ಪ್ರಸಾದ ಮಡಿವಾಳ, ಮಹಾದೇವ, ಸದಾಶಿವ, ಸದ್ದಾಂ ಸೇರಿ ಕಾರ್ಯಾಚರಣೆಗಿಳಿದರು. ಪ್ರಶಾಂತ, ಚಂದ್ರಪ್ಪ, ಬಸವರಾಜ ಜಾಡರ್ ಅವರ ಜೊತೆ ಮಂಜುನಾಥ ಕಾಶಿಕೋವಿ ಕೈ ಜೋಡಿಸಿದರು. ಜೀಪ್ ಚಾಲಕ ಮಾರುತಿ ಅವರು ಸಹ ಕಳ್ಳನ ಹುಡುಕಾಟಕ್ಕೆ ಸಹಕಾರ ನೀಡಿದರು.
ಈ ತಂಡದವರು ನಡೆಸಿದ ಕಾರ್ಯಾಚರಣೆಯಲ್ಲಿ ಹವಳದ ಸರ ಎಗರಿಸಿದ್ದ ಇರಾನಿ ಗ್ಯಾಂಗಿನವರು ಆಂದ್ರಪ್ರದೇಶದಲ್ಲಿರುವುದು ಗೊತ್ತಾಯಿತು. ಮೆಕಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ಸೈಯ್ಯದ್ ಇಮ್ರಾನ್ ಶಿರಸಿಗೆ ಬಂದು ದರೋಡೆ ಮಾಡಿದ್ದು, ಆ ಆರೋಪಿ ಇರಾನಿ ಗ್ಯಾಂಕ್ ಸದಸ್ಯನಾಗಿರುವುದು ಗಮನಕ್ಕೆ ಬಂದಿತು. ಕೂಡಲೇ ಪೊಲೀಸರು ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದರು. ಕಳ್ಳತನಕ್ಕೆ ಬಳಸಿದ ಬೈಕನ್ನು ಜಪ್ತು ಮಾಡಿದರು. ಈ ಇರಾನಿ ಗ್ಯಾಂಗಿನವರು ಹಲವು ರಾಜ್ಯದಲ್ಲಿ ಅಪರಾಧ ನಡೆಸಿದ್ದು, ಆ ಬಗ್ಗೆಯೂ ಪೊಲೀಸರು ತನಿಖೆ ಶುರು ಮಾಡಿದರು.