ಮುಂಡಗೋಡು ಕೊಪ್ಪದ ಪ್ರಜ್ವಲ ಕಟ್ಟಿಮನಿ, ಮಂಜು ಸಂಕ್ರಪ್ಪ ಹಾಗೂ ಶ್ರೇಯಸ್ ಕಟ್ಟಿಮನಿ ಸೇರಿ ನಡು ರಸ್ತೆಯಲ್ಲಿ ಬರ್ತಡೆ ಪಾರ್ಟಿ ಮಾಡಿದ್ದಾರೆ. `ರಸ್ತೆ ಬಿಟ್ಟು ಬದಿಗೆ ಪಾರ್ಟಿ ಮಾಡಿ’ ಎಂದು ಸಲಹೆ ನೀಡಿದ ಸಂತೋಷ ಕಟ್ಟಿಮನಿ ಅವರಿಗೆ ಆ ಮೂವರು ಸೇರಿ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಮುಂಡಗೋಡಿನ ಕೊಪ್ಪದಲ್ಲಿ ಮಂಜು ಸಂಕ್ರಪ್ಪ, ಪ್ರಜ್ವಲ ನಾರಾಯಣ ಕಟ್ಟಿಮನಿ ಹಾಗೂ ಶ್ರೇಯಸ್ ನಾರಾಯಣ ಕಟ್ಟಿಮನಿ ಅವರು ವಾಸವಾಗಿದ್ದಾರೆ. ಕೊಪ್ಪಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಅವರೆಲ್ಲರೂ ಸೇರಿ ಪಾರ್ಟಿ ಮಾಡಿದ್ದಾರೆ. ಅಕ್ಟೊಬರ 10ರ ರಾತ್ರಿ 9 ಗಂಟೆಗೆ ಅವರೆಲ್ಲರೂ ನಡು ರಸ್ತೆಯಲ್ಲಿ ಕುಳಿತು ಮೋಜು-ಮಸ್ತಿ ನಡೆಸಿದ್ದಾರೆ. `ಹ್ಯಾಪಿ ಬರ್ತಡೆ’ ಎಂದು ಹಾಡಿ-ಕುಣಿಯುತ್ತ ಅವರು ಕಾಲ ಕಳೆದಿದ್ದಾರೆ.
ಮುಂಡಗೋಡು ಕೊಪ್ಪದ ಸಂತೋಷ ರಾಜಪ್ಪ ಕಟ್ಟಿಮನಿ ಅವರು ಬೇಕರಿ ಕೆಲಸ ಮಾಡಿಕೊಂಡಿದ್ದು, ಅದೇ ವೇಳೆ ಕೆಲಸ ಮುಗಿಸಿ ಮನೆಗೆ ಮರಳಿದ್ದಾರೆ. ಆದರೆ, ರಸ್ತೆಯಲ್ಲಿ ಆ ಮೂವರು ಕುಳಿತಿದ್ದರಿಂದ ಸಂತೋಷ ಕಟ್ಟಿಮನಿ ಅವರಿಗೆ ಮುಂದೆ ಸಾಗಲು ಸಾಧ್ಯವಾಗಿಲ್ಲ. `ನಾನು ಮನೆಗೆ ಹೋಗಬೇಕು. ರಸ್ತೆ ಮೇಲಿಂದ ಎದ್ದೇಳಿ’ ಎಂದು ಸಂತೋಷ ಕಟ್ಟಿಮನಿ ಅವರು ಹೇಳಿದ್ದಾರೆ.
ಬರ್ತಡೆ ಪಾರ್ಟಿಗೆ ಅಡ್ಡಿಪಡಿಸಿದ ಕಾರಣ ಸಂತೋಷ ಕಟ್ಟಿಮನೆ ಅವರಿಗೆ ಆ ಮೂವರು ಬೈದಿದ್ದಾರೆ. `ಪಾರ್ಟಿ ಮುಗಿಯುವವರೆಗೆ ಇಲ್ಲೇ ಇದ್ದು, ನಂತರ ಮನೆಗೆ ಹೋಗು’ ಎಂದು ತಾಕೀತು ಮಾಡಿದ್ದಾರೆ. ಇದಕ್ಕೆ ಒಪ್ಪದ ಕಾರಣ ಆ ಮೂವರು ಸೇರಿ ಸಂತೋಷ ಕಟ್ಟಿಮನಿ ಅವರಿಗೆ ಮೂಗಿಗೆ ಹೊಡೆದಿದ್ದಾರೆ. ಕಾಲಿನಿಂದ ಒದ್ದು ನೋವು ಮಾಡಿದ್ದಾರೆ. ಜೊತೆಗೆ ಅಲ್ಲಿದ್ದ ಕಟ್ಟಿಗೆಯಿಂದ ಬಡಿದು ಗಾಯಗೊಳಿಸಿದ್ದಾರೆ. ಸಂತೋಷ ಕಟ್ಟಿಮನಿ ಅವರು ತಕ್ಷಣ ಅಲ್ಲಿಂದ ಓಡಿ ಜೀವ ಉಳಿಸಿಕೊಂಡಿದ್ದಾರೆ.