ಕಾರವಾರದ ದೈವಜ್ಞ ಭವನದಲ್ಲಿ ಭಾನುವಾರ ಓಣಂ ಆಚರಣೆ ನಡೆದಿದ್ದು, ಕೇರಳದ ಚಿತ್ರ ನಟ ನ್ಯಾನ್ಸಿ ಮತ್ತು ದೀಪು ಅವರು ಭಾಗವಹಿಸಿದ್ದಾರೆ. ಕಾರವಾರದ ಕೇರಳ ಸಮಾಜದವರೆಲ್ಲರೂ ಒಟ್ಟಾಗಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ಕೇರಳದ ಜಿ ಕೆ ರಾಮ್ ಅವರು ಕಾರವಾರಕ್ಕೆ ಆಗಮಿಸಿದ್ದು, ಇಲ್ಲಿ ಬಹುದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾರೆ. 2001ರಲ್ಲಿ ಜಿ ಕೆ ರಾಮ್ ಅವರು ಕೇರಳ ಸಮಾಜದ ಓಣಂ ಆಚರಣೆಯನ್ನು ಕಾರವಾರಕ್ಕೆ ಪರಿಚಯಿಸಿದ್ದು, ಅದೇ ಪರಂಪರೆ ಇದೀಗ ಮುಂದುವರೆದಿದೆ. ಜಿ ಕೆ ರಾಮ್ ಅವರ ಮರಣದ ನಂತರ ಅವರ ಪುತ್ರ ಪ್ರಸಾದ್ ಜಿ ಕೆ ರಾಮ್ ಅವರು ಈ ಆಚರಣೆಯ ಮುಂಚೂಣಿವಹಿಸುತ್ತಿದ್ದಾರೆ. ಈ ದಿನ ನಡೆದ ಆಚರಣೆಯಲ್ಲಿ ಕೇರಳದ ಮಹಾಬಲಿ ರಾಜನ ಪಾತ್ರ ನೋಡಗರ ಗಮನಸೆಳೆದಿದೆ. ಕೇರಳದ ಸಾಂಪ್ರದಾಯಿಕ ಉಡುಗೆ-ತೊಡುಗೆಗಳಲ್ಲಿ ರಾಜನ ವೇಷ ಧರಿಸಿ ಆಗಮಿಸಿದ್ದ ಕಲಾವಿದರ ಪ್ರದರ್ಶನವು ಓಣಂ ಹಬ್ಬದ ಪೌರಾಣಿಕ ಹಿನ್ನೆಲೆಯನ್ನು ನೆನಪಿಸಿದೆ.
`ಕೇರಳದ ಜನಪದ ನಂಬಿಕೆಯ ಪ್ರಕಾರ, ಪ್ರಜೆಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಮಹಾಬಲಿ ರಾಜನು ಓಣಂ ಸಂದರ್ಭದಲ್ಲಿ ತನ್ನ ಪ್ರಜೆಗಳನ್ನು ಭೇಟಿಯಾಗಲು ಬರುತ್ತಾನೆ ಎಂಬ ನಂಬಿಕೆಯಿದೆ. ಸಮಾನತೆ, ಸಮೃದ್ಧಿ ಮತ್ತು ಸಂತೋಷದ ಸಂಕೇತವಾಗಿ ಮಹಾಬಲಿ ರಾಜನನ್ನು ಸ್ಮರಿಸಲಾಗುತ್ತದೆ’ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇರಳದ ಸಾಂಪ್ರದಾಯಿಕ ಓಣಂ ಭೋಜನ ಜನರ ಮನಗೆದ್ದಿದೆ. ಕೇರಳದಿಂದಲೇ ಆಗಮಿಸಿದ್ದ ಅಡುಗೆ ತಜ್ಞರು ಹಾಗೂ ಬಡಿಸುವ ಸಿಬ್ಬಂದಿ ಸುಮಾರು 25 ಬಗೆಯ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿ ಅತಿಥಿಗಳಿಗೆ ಉಣಬಡಿಸಿದ್ದಾರೆ. ಕೇರಳದ ಆಹಾರ ಸಂಸ್ಕೃತಿಯ ವೈವಿಧ್ಯತೆಯನ್ನು ಪರಿಚಯಿಸಿದ ಈ ಭೋಜನವನ್ನು ಕಾರವಾರದ ಜನರು ಸವಿದಿದ್ದಾರೆ.
ಚಲನಚಿತ್ರ ಕಲಾವಿದರಾದ ನ್ಯಾನ್ಸಿ ಮತ್ತು ದೀಪು ಉದ್ಘಾಟನಾ ಕಾರ್ಯಕ್ರಮ ನಡೆಸಿದ್ದು, ಜಯಪ್ರಕಾಶ್, ಎಂ.ಕೆ. ನಾರ್ಕಾ ಅಭಿವೃದ್ಧಿ ಅಧಿಕಾರಿ, ಪರಮೇಶ್ವರನ್ ಹಾಗೂ ಮಂಗಳೂರು ಮಲಯಾಳ ಸಮಾಜದ ಅಧ್ಯಕ್ಷ ಟಿ.ಕೆ. ರಾಜನ್ ಅವರು ಇದಕ್ಕೆ ಸಾಕ್ಷಿಯಾದರು. ಚೆಂಡಮೇಳ, ಮಹಾಬಲಿ ಆಗಮನ, ಮಕ್ಕಳ ತಿರುವಾತಿರ ನೃತ್ಯ, ನಾಡನ್ ಪಾಟ್ಟು, ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆ ನೀಡಿದವು. ಕೇರಳದ ಪ್ರಸಿದ್ಧ ಕಲಾವಿದರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರವಾರ ಕೇರಳ ಸಮಾಜದ ಅಧ್ಯಕ್ಷ ಪಿ.ಪಿ. ವಾಸುದೇವನ್, ಜಯಪ್ರಕಾಶ್ ಪಿಳ್ಳೈ ಸತೀಶ್ ನಾಯರ್, ಮತ್ತು ಅವರ ಪತ್ನಿ ಸೋನಾಲಿ ನಾಯರ್, ಉದ್ಯಮಿಗಳಾದ ಪ್ರಜಿತ್, ಮೊಹಮ್ಮದ್, ರವಿ ನಾಯರ್, ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ಬಿ ನಾಯಕ, ಮತ್ತು ಅವರ ಪತ್ನಿ ಸ್ನೇಹಾ ನಾಯಕ ಅವರು ಹಾಜರಿದ್ದರು. 700ಕ್ಕೂ ಅಧಿಕ ಜನರ ಸಮ್ಮಿಲನಕ್ಕೆ ಓಣಂ ಕಾರ್ಯಕ್ರಮ ಸಾಕ್ಷಿಯಾಯಿತು. ಕಾರವಾರದಲ್ಲಿಯೂ ಕೇರಳದ ಸಂಸ್ಕೃತಿ, ಸಂಪ್ರದಾಯ, ಆತಿಥ್ಯ ಹಾಗೂ ಸೌಹಾರ್ದತೆಯನ್ನು ಸಾರಿದ ಈ ಓಣಂ ಸಂಭ್ರಮಾಚರಣೆಯು ವಿವಿಧ ಸಮಾಜಗಳ ಮತ್ತು ವಿವಿಧ ಧರ್ಮಗಳ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿತು.