ಹೊನ್ನಾವರದಲ್ಲಿ ಅರಣ್ಯಾಧಿಕಾರಿಗಳು ನೆಟ್ಟ ಗಿಡಗಳು ಬದುಕುತ್ತಿಲ್ಲ. ಅದಾಗಿಯೂ, ಅಧಿಕಾರಿಗಳು ಸರ್ಕಾರದ ಬೊಕ್ಕಸಕ್ಕೆ ಖರ್ಚು ಹಾಕುವುದನ್ನು ಮಾತ್ರ ನಿಲ್ಲಿಸಿಲ್ಲ. ಅರಣ್ಯದೊಳಗೆ ಪ್ಲಾಸ್ಟಿಕ್ ನಿಷೇಧ ಎಂಬ ನಿಯಮವಿದ್ದರೂ ಅದು ಹೊನ್ನಾವರದ ಕಾಡುಗಳಲ್ಲಿ ಪಾಲನೆ ಆಗುತ್ತಿಲ್ಲ.
ಹೊನ್ನಾವರದ ಕಾಡುಗಳಲ್ಲಿ `ಗಿಡ-ಮರ, ಪ್ರಾಣಿ ಪಕ್ಷಿಗಳನ್ನು ಮಕ್ಕಳ ಹಾಗೇ ಕಾಣಿರಿ’ ಎಂಬ ಬೋರ್ಡುಗಳಿವೆ. ಆದರೆ, ಆ ಬೋರ್ಡಿನ ಅಡಿಭಾಗವೇ ಅಪಾಯಕಾರಿ ರೀತಿ ಪ್ಲಾಸ್ಟಿಕ್ ತ್ಯಾಜ್ಯ ಹರಡಿವೆ. ಅಲ್ಲಿ ನೆಟ್ಟ ಬಹುತೇಕ ಗಿಡಗಳು ಒಣಗುತ್ತಿದ್ದು, ಅದಕ್ಕೆ ಖರ್ಚು ಮಾಡಲಾಗಿದ್ದು, ಖರ್ಚು ಮಾಡಿದ ಹಣದ ಬಗ್ಗೆಯೂ ಮಾಹಿತಿ ಗೌಪ್ಯವಾಗಿಯೇ ಉಳಿದಿದೆ. ಸದ್ಯ ಈ ಎಲ್ಲಾ ವಿಷಯದ ಬಗ್ಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಕ್ಷೇಪಿಸಿದ್ದು, `ಅರಣ್ಯ ಅತಿಕ್ರಮಣದಾರರಿಗೆ ತೊಂದರೆ ನೀಡುವ ಬದಲು ಪರಿಸರ ರಕ್ಷಣೆಗೆ ಒತ್ತುಕೊಡಿ’ ಎಂದು ಆಗ್ರಹಿಸಿದೆ.
`ನೆಡುತೋಪು ಗಿಡ ನೆಡುವ ಕ್ಷೇತ್ರದಲ್ಲಿ ಸೂಚನಾ ಫಲಕದಲ್ಲಿ ಗುತ್ತಿಗೆದಾರನ ಹೆಸರು ಮತ್ತು ಕಾಮಗಾರಿ ಮೊತ್ತ ಪ್ರಕಟಿಸಲು ಮತ್ತು ನೆಡುತೋಪು ಗಿಡಗಳ ಯೋಜನೆಯ ಮಾಹಿತಿಯನ್ನು ವಲಯ ಅರಣ್ಯ ಕಚೇರಿ ಮತ್ತು ಸ್ಥಳಿಯ ಗ್ರಾಮ ಪಂಚಾಯತದ ಸೂಚನಾ ಫಲಕದಲ್ಲಿ ಸಾರ್ವತ್ರಿಕವಾಗಿ ಪ್ರತಿವರ್ಷ ಪ್ರಕಟಿಸಲು ಮೇಲಧಿಕಾರಿಗಳು ಸೂಚಿಸಿದ್ದಾರೆ. ಆದರೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಸೂಚನೆಗೆ ಇಲ್ಲಿ ಬೆಲೆಯೇ ಇಲ್ಲ’ ಎಂದು ರವೀಂದ್ರ ನಾಯ್ಕ ಅವರು ಆಕ್ಷೇಪಿಸಿದ್ದಾರೆ. `ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಸಾಗುವಳಿಗೆ ಕಿರುಕುಳ ನೀಡುವ ಅರಣ್ಯ ಸಿಬ್ಬಂದಿ ಅದರ ಬದಲು ಗಿಡಗಳನ್ನು ಬದುಕಿಸಲು ಆಸಕ್ತಿವಹಿಸಬೇಕು’ ಎಂದವರು ಆಗ್ರಹಿಸಿದ್ದಾರೆ.