ಆನಮೋಡು ತನಿಖಾ ಠಾಣೆಯಲ್ಲಿ ಕರ್ತವ್ಯ ನಿಭಾಯಿಸುವ ಅಬಕಾರಿ ನಿರೀಕ್ಷಕ ಮಹೇಂದ್ರ ನಾಯ್ಕ ಅವರಿಗೆ ಗೋವಾದಿಂದ ಅಕ್ರಮ ಸರಾಯಿ ತಂದ ಉದಯ ಬಸೋಜಿ ಅವರು 200ರೂ ಲಂಚ ನೀಡಲು ಮುಂದಾಗಿದ್ದಾರೆ. ಇಂಥಹುದೇ ವಿಡಿಯೋ ಮಾಡಿದ್ದ ಬೆಳಗಾವಿಯ ಬುದ್ಧ-ಬಸವ ಅಂಬೇಡ್ಕರ್ ಸಂಘದ ರಾಜ್ಯಾಧ್ಯಕ್ಷ ಮಾರುತಿ ಕೇಳಗೇರಿ ದೂರು ಹಿಂಪಡೆಯುವುದಕ್ಕಾಗಿ 10 ಲಕ್ಷ ರೂ ನೀಡುವಂತೆ ಮಹೇಂದ್ರ ನಾಯ್ಕ ಅವರಿಗೆ ದುಂಬಾಲು ಬಿದ್ದಿದ್ದಾರೆ!
ಜೊಯಿಡಾದದ ಆನಮೋಡು ಅಬಕಾರಿ ತಪಾಸಣಾ ಕೇಂದ್ರದಲ್ಲಿ ಮಹೇಂದ್ರ ನಾಯ್ಕ ಅವರು ಅಬಕಾರಿ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಸಿಬ್ಬಂದಿ ಜೊತೆ ಅಲ್ಲಿ ಮೊಕ್ಕಾಂ ಹೂಡಿರುವ ಅವರು ಗೋವಾದಿಂದ ಬರುವ ಎಲ್ಲಾ ವಾಹನ ಹಿಡಿಯುತ್ತಿದ್ದಾರೆ. ಅಕ್ರಮ ಸರಾಯಿ ಸಾಗಾಟ ಮಾಡುವವರನ್ನು ತಡೆದು ಅವರ ಬಳಿಯಿದ್ದ ಬಾಟಲಿ ಒಡೆಯುತ್ತಿದ್ದಾರೆ. ದೊಡ್ಡ ಪ್ರಮಾಣದ ಬಾಟಲಿಗಳಿದ್ದರೆ ಅವರ ವಿರುದ್ಧ ಕೇಸು ಹಾಕುತ್ತಿದ್ದಾರೆ. ಹೀಗಿರುವಾಗ, ಅಕ್ಟೊಬರ್ 24ರ ಸಂಜೆ 4 ಗಂಟೆಯ ವೇಳೆಗೆ ಉದಯ ಬಸೋಜಿ ಎಂಬಾತರನ್ನು ಮಹೇಂದ್ರ ನಾಯ್ಕ ಅವರು ಹಿಡಿದಿದ್ದಾರೆ. ಉದಯ ಬಸೋಜಿ ಅವರ ಬಳಿ ಎರಡು ಸರಾಯಿ ಬಾಟಲಿಗಳಿದ್ದು, `ಆ ಬಾಟಲಿಯನ್ನು ಕರ್ನಾಟಕಕ್ಕೆ ಒಯ್ಯುವ ಹಾಗಿಲ್ಲ’ ಎಂದು ಹೇಳಿದ್ದಾರೆ. ಆಗ, ಉದಯ ಬಸೋಜಿ ಅವರು ಜೇಬಿನಿಂದ 200ರೂ ತೆಗೆದು ಅಬಕಾರಿ ಸಿಬ್ಬಂದಿಗೆ ಕೊಟ್ಟಿದ್ದಾರೆ. ಆದರೆ, ಅಲ್ಲಿದ್ದ ಅಬಕಾರಿ ಸಿಬ್ಬಂದಿ ಆ ಹಣಪಡೆದಿಲ್ಲ. ಬದಲಾಗಿ, ಆ ಎರಡು ಸರಾಯಿ ಬಾಟಲಿಪಡೆದು ಅದನ್ನು ಅಲ್ಲಿಯೇ ಒಡೆದಿದ್ದಾರೆ.
ಈ ಎಲ್ಲವನ್ನು ದೂರದಿಂದಲೇ ನೋಡುತ್ತಿದ್ದ ಬೆಳಗಾವಿ ಜ್ಯೋತಿ ನಗರದ ಮಾರುತಿ ಕೇಳಗೇರಿ ಅಲ್ಲಿಗೆ ಧಾವಿಸಿ ಬಂದಿದ್ದಾರೆ. `ನಿಮ್ಮ ಅಕ್ರಮ ವಿಡಿಯೋ ಮಾಡಿದ್ದೇನೆ’ ಎಂದು ಅವರು ಮಹೇಂದ್ರ ನಾಯ್ಕ ಅವರ ಬಳಿ ಹೇಳಿದ್ದಾರೆ. `ಆ ವಿಡಿಯೋ ಜೊತೆ ಮೇಲಧಿಕಾರಿಗಳಿಗೆ ದೂರು ನೀಡಿದ್ದು, ದೂರು ಹಿಂಪಡೆಯಲು 10 ಲಕ್ಷ ರೂ ಕೊಡಬೇಕು’ ಎಂದು ತಾಕೀತು ಮಾಡಿದ್ದಾರೆ. ಆಗ, ಮಹೇಂದ್ರ ನಾಯ್ಕ ಅವರು `ದೂರಿನ ಬಗ್ಗೆ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ತಪ್ಪಿದ್ದರೆ ಕ್ರಮ ಜರುಗಿಸುತ್ತಾರೆ. ನಿಮಗೆ ಮಾತ್ರ ಹಣ ಕೊಡಲ್ಲ’ ಎಂದು ಕಟುವಾಗಿ ಹೇಳಿದ್ದಾರೆ. ಇದರಿಂದ ಸಿಟ್ಟಾದ ಮಾರುತಿ ಕೇಳಗೇರಿ ಅವರು `ತಾನು ಬುದ್ಧ-ಬಸವ ಅಂಬೇಡ್ಕರ್ ಸಂಘದ ರಾಜ್ಯಾಧ್ಯಕ್ಷನಾಗಿದ್ದು, ನಿಮ್ಮ ಮೇಲೆ ಜಾತಿ ನಿಂದನೆ ಕೇಸ್ ಹಾಕುವೆ’ ಎಂದು ಬೆದರಿಸಿದ್ದಾರೆ. ಸಂಜೆ 4.20ರಿಂದ 7.20ರವರೆಗೂ ಆನಮೋಡು ತಪಾಸಣಾ ಕೇಂದ್ರದ ಸುತ್ತಲೂ ಓಡಾಡುತ್ತಿದ್ದ ಮಾರುತಿ ಕೇಳಗೇರಿ ಅವರು ನಂತರ ಏನೂ ಸಿಗದೇ ಅಲ್ಲಿಂದ ಹೊರಟಿದ್ದಾರೆ. ತಮಗಾದ ಕೆಟ್ಟ ಅನುಭವದ ಬಗ್ಗೆ ಮಹೇಂದ್ರ ನಾಯ್ಕ ಅವರು ಮೇಲಧಿಕಾರಿಗಳಿಗೆ ವಿವರಿಸಿದ್ದು, ಅವರ ಸಲಹೆ ಮೇರೆಗೆ ಪೊಲೀಸ್ ದೂರು ನೀಡಿದ್ದಾರೆ.