ಯಲ್ಲಾಪುರ ಹಾಗೂ ಮುಂಡಗೋಡು ಭಾಗದ ಕೆಲವಡೆ ಈ ವರ್ಷವೂ ಆನೆಗಳ ಆಗಮನವಾಗಿದೆ. ಭತ್ತದ ಗದ್ದೆಗಳನ್ನು ಗುರಿಯಾಗಿರಿಸಿಕೊಂಡು ಆನೆಗಳು ದಾಳಿ ನಡೆಸುತ್ತಿವೆ.
ಯಲ್ಲಾಪುರದ ಕಿರವತ್ತಿ-ಮದನೂರು-ಹಣಶೆಟ್ಟಿಕೊಪ್ಪ ಪ್ರದೇಶದ ಸುತ್ತಲು ಆನೆಗಳ ಸಂಚಾರ ಕಾಣಿಸಿದೆ. ಮುಂಡಗೋಡಿನ ಕಾತೂರು, ಹನುಮಾಪುರ ಭಾಗದಲ್ಲಿ ಕಾಡಾನೆಗಳ ಓಡಾಟ ಜೋರಾಗಿದೆ. ಹಿಂಡು ಹಿಂಡಾಗಿ ಬರುವ ಆನೆಗಳು ಪಟಾಕಿ ಸದ್ದಿಗೂ ಬೆದರುತ್ತಿಲ್ಲ. ಕೆಲವೊಮ್ಮೆ ಹಗಲಿನಲ್ಲಿಯೇ ಅವರು ಭತ್ತದ ಗದ್ದೆ ಬಳಿ ಬರುತ್ತಿವೆ. ಸಂಜೆ ವೇಳೆ ಭತ್ತದ ಗದ್ದೆಗೆ ನುಗ್ಗಿ ಫಸಲು ಹಾಳು ಮಾಡುತ್ತಿವೆ. ಕೆಲ ದಿನಗಳಿಂದ ನಿರಂತರವಾಗಿ ಆನೆಗಳ ಆಗಮನವಾಗುತ್ತಿದ್ದು, ಅವು ಭತ್ತದ ಗದ್ದೆಗಳನ್ನು ತುಳಿದು ಹಾಳು ಮಾಡುತ್ತಿವೆ. ಕೆಲವಡೆ 10ಕ್ಕೂ ಅಧಿಕ ಆನೆಗಳ ಹಿಂಡು ಸಂಚಾರ ನಡೆಸಿದೆ. ರಾತ್ರಿಯೂ ಒಂಟಿ ಸಲಗ ಗದ್ದೆಗೆ ಬರುತ್ತಿದ್ದು, ಈ ಹಿನ್ನಲೆ ಆ ಭಾಗದ ರೈತರು ಕಂಗಾಲಾಗಿದ್ದಾರೆ.
ಕೊಯ್ಲಿಗೆ ಬಂದಿರುವ ಭತ್ತ, ನಾಟಿ ಮಾಡಿರುವ ಭತ್ತ, ಫಸಲು ಬಿಟ್ಟಿರುವ ಬಾಳೆ ಹಾಗೂ ಅಡಿಕೆ ಗಿಡಗಳಿಗೆ ಆನೆಯಿಂದ ಹಾನಿಯಾಗಿದೆ. ಭತ್ತದ ಗದ್ದೆಗಳಲ್ಲಿ ಆನೆಗಳು ಓಡಾಡಿರುವುದರಿಂದ ಕೊಯ್ಲಿಗೆ ಬಂದಿದ್ದ ಭತ್ತದ ತೆನೆಗಳು ನೆಲಕ್ಕೆ ಒರಗಿವೆ. ಈ ವರ್ಷ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ರೈತರು ಈಗಾಗಲೇ ಬೆಳೆ ನಷ್ಟದ ಆತಂಕದಲ್ಲಿದ್ದಾರೆ. ಅಲ್ಪಸ್ವಲ್ಪ ಬಂದಿರುವ ಬೆಳೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಕಾಡಾನೆಗಳ ದಾಳಿ ಮತ್ತಷ್ಟು ಸಂಕಷ್ಟ ತಂದಿದೆ. ದಾಂಡೇಲಿ ಅರಣ್ಯ ಪ್ರದೇಶದಿಂದ ಉಗ್ಗಿನಕೇರಿ ಮಾರ್ಗವಾಗಿ ಕಾಡಾನೆಗಳು ಮುಂಡಗೋಡಿಗೆ ಆಗಮಿಸಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆನೆಗಳು ಬಹುಬೇಗ ಊರು ಪ್ರವೇಶಿಸಿದ್ದು, ರೈತರು ಗದ್ದೆಗೆ ಹೋಗಲು ಹೆದರುತ್ತಿದ್ದಾರೆ.