ಧಾರವಾಡದ ಇಕೋಹಬ್ ಫೌಂಡೇಶನ್ ಸಹಯೋಗದಲ್ಲಿ ಕಾರವಾರದ ನಮ್ಮ ಸೋಶಿಯಲ್ ಗುಡ್ ಸಂಸ್ಥೆಯವರು ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದ ಪ್ರೇಮ ಆಶ್ರಮ ಬಾಲಕಿಯರ ವಸತಿ ನಿಲಯದಲ್ಲಿ `ಆಶ್ರಿತಾ’ ಯೋಜನೆ ಶುರು ಮಾಡಿದ್ದಾರೆ.
ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಮುಟ್ಟಿನ ಆರೋಗ್ಯ, ಸ್ವಾಸ್ಥ್ಯ ಮತ್ತು ಸುಸ್ಥಿರತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಯೋಜನೆಗೆ ಚಾಲನೆ ನೀಡಲಾಗಿದೆ. 6 ತಿಂಗಳ ಅವಧಿಗೆ ಯೋಜನೆ ನಡೆಯಲಿದ್ದು, ವಸತಿ ನಿಲಯದ 30 ವಿದ್ಯಾರ್ಥಿನಿಯರು ಅದರ ಪ್ರಯೋಜನಪಡೆಯಲಿದ್ದಾರೆ. ನಮ್ಮ ಸೋಶಿಯಲ್ಗುಡ್ ಸಂಸ್ಥೆಯು ಈ ಯೋಜನೆಯನ್ನು ಪ್ರಾಯೋಜಿಸಿದ್ದು, ಇಕೋಹಬ್ ಫೌಂಡೇಶನ್ನ ಸಂಸ್ಥಾಪಕಿ ಮತ್ತು ಸಿಇಒ ವೈಶಾಖಾ ಕುಲಕರ್ಣಿ ಅವರು ಪ್ರತಿ ತಿಂಗಳು ಒಂದು ಗಂಟೆಯAತೆ ಒಟ್ಟು 6 ತರಬೇತಿ ಅವಧಿಗಳನ್ನು ನಡೆಸಲಿದ್ದಾರೆ.
ಈ ಅವಧಿಗಳಲ್ಲಿ ಮುಟ್ಟಿನ ಮೂಲಭೂತ ಅರಿವು, ಅನಿಯಮಿತ ಮುಟ್ಟಿನ ಸಮಸ್ಯೆಗಳು, ಮುಟ್ಟಿನ ಆರೋಗ್ಯಕ್ಕೆ ಅಗತ್ಯವಾದ ಪೌಷ್ಟಿಕ ಆಹಾರ, ಯೋಗ ಮತ್ತು ಧ್ಯಾನದ ಮಹತ್ವದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಈ ಮೂಲಕ ಬಾಲಕಿಯರಲ್ಲಿ ಮುಟ್ಟಿನ ಕುರಿತ ಕಳಂಕವನ್ನು ಹೋಗಲಾಡಿಸಿ, ಆತ್ಮವಿಶ್ವಾಸ ಹೆಚ್ಚಿಸುವ ಗುರಿ ಹೊಂದಲಾಗಿದೆ. ಪ್ರತಿ ತರಬೇತಿ ಅವಧಿಯಲ್ಲಿಯೂ ವಿದ್ಯಾರ್ಥಿನಿಯರಿಗೆ ಪರಿಸರ ಸ್ನೇಹಿ ಬಿದಿರು ಆಧಾರಿತ ಸ್ಯಾನಿಟರಿ ಪ್ಯಾಡ್ ಹಾಗೂ ನೆಲಗಡಲೆ ಚಿಕ್ಕಿ ಪ್ಯಾಕ್ ವಿತರಿಸಲಾಗುತ್ತದೆ.
ಕಾರ್ಯಕ್ರಮವನ್ನು ಶಾಲಾ ಪ್ರಾಂಶುಪಾಲ ಗಣೇಶ್ ಬಿಷ್ಟಣ್ಣನವರ ಮತ್ತು ಶಿಕ್ಷಕಿ ರೂಪಾಲಿ ಸಾವಂತ್ ಉದ್ಘಾಟಿಸಿದ್ದಾರೆ. ನಮ್ಮ ಸೋಶಿಯಲ್ ಗುಡ್ ಸಂಸ್ಥೆಯ ಅಧ್ಯಕ್ಷ ಪವನ್ ಸಾವಂತ್ ಅವರು ಮಾತನಾಡಿ `ವಿದ್ಯಾರ್ಥಿನಿಯರು ಯಾವುದೇ ಹಿಂಜರಿಕೆ ಇಲ್ಲದೆ ತಮ್ಮ ಆರೋಗ್ಯ ಸಮಸ್ಯೆಗಳನ್ನು ತರಬೇತುದಾರರೊಂದಿಗೆ ಹಂಚಿಕೊಳ್ಳಬೇಕು’ ಎಂದು ಕರೆ ನೀಡಿದ್ದಾರೆ. `ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಕಾರವಾರ ತಾಲೂಕಿನಾದ್ಯಂತ ಹೆಚ್ಚಿನ ಶಾಲೆಗಳಿಗೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ’ ಎಂದು ಸಂಘಟಕರು ತಿಳಿಸಿದ್ದಾರೆ.