ಕನ್ನಡ ರಾಜ್ಯೋತ್ಸವ ಆಚರಣೆಗೆ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಸಹಕಾರಿ ಸಚಿವ ಲಕ್ಷ್ಮಣ ಸವದಿ ಅವರು ಕನ್ನಡಪರ ಸಂಘಟನೆಗಳ ಮುಂದೆ ಕ್ಷಮೆ ಕೋರಿದ್ದಾರೆ. ಕನ್ನಡಾಂಬೆಯ ಮೂರ್ತಿ ಹೊತ್ತ ಮೆರವಣಿಗೆ ಆಗಮಿಸುವ ಮುನ್ನ ಅವರು ಧ್ವಜಾರೋಹಣ ನೆರವೇರಿಸಿದ್ದು, ಇದರಿಂದ ಸಿಡಿಮಿಡಿಗೊಂಡ ಹೋರಾಟಗಾರರನ್ನು ಸಚಿವರು ಸಮಾಧಾನ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾಡಳಿತದಿಂದ ಪ್ರತಿ ವರ್ಷ ಅದ್ಧೂರಿ ಕನ್ನಡ ರಾಜ್ಯೋತ್ಸವ ನಡೆಯುತ್ತದೆ. ರಾಜ್ಯೋತ್ಸವದ ಹಿನ್ನಲೆ ಸ್ಥಬ್ದಚಿತ್ರಗಳ ಮೆರವಣಿಗೆಯನ್ನು ನಡೆಸಲಾಗುತ್ತದೆ. ಈ ಮೆರವಣಿಗೆಯಲ್ಲಿ ಕನ್ನಡಾಂಬೆಯ ಮೂರ್ತಿಯನ್ನು ಹೊತ್ತು ತರಲಾಗುತ್ತದೆ. ಪೊಲೀಸ್ ಪೆರೆಡ್ ಮೈದಾನದಲ್ಲಿ ಕನ್ನಡಾಂಬೆಗೆ ಪೂಜೆ ಸಲ್ಲಿಸಿದ ಬಳಿಕವೇ ಧ್ವಜಾರೋಹಣ ನೆರವೇರುತ್ತದೆ. ಆದರೆ, ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿವಹಿಸಿಕೊಂಡಿರುವ ಲಕ್ಷö್ಮಣ ಸವದಿ ಅವರು ಆ ಶಿಷ್ಟಾಚಾರ ಪಾಲಿಸಿಲ್ಲ. ಕನ್ನಡಾಂಬೆಗೆ ಪೂಜೆ ಸಲ್ಲಿಸುವ ಮುನ್ನವೇ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ.
ಇದರಿಂದ ಮೆರವಣಿಗೆಯಲ್ಲಿ ಭಾಗವಹಿಸಿದ ಅನೇಕರು ಧ್ವಜಾರೋಹಣ ನೋಡಲು ಸಾಧ್ಯವಾಗಿಲ್ಲ. ಜೊತೆಗೆ ಕನ್ನಡಾಂಬೆಯ ಮೂರ್ತಿಗೆ ಪೂಜೆ ಸಲ್ಲಿಸದೇ ಧ್ವಜಾರೋಹಣ ಮಾಡಿದ ಬಗ್ಗೆ ಹೋರಾಟಗಾರರು ಆಕ್ಷೇಪವ್ಯಕ್ತಪಡಿಸಿದ್ದಾರೆ. ತಮ್ಮಿಂದ ಆದ ತಪ್ಪನ್ನು ಕೂಡಲೇ ಒಪ್ಪಿಕೊಂಡ ಸಚಿವರು ಎಲ್ಲರ ಮುಂದೆ ಬಹಿರಂಗವಾಗಿಯೇ ಕ್ಷಮೆ ಕೋರಿದ್ದಾರೆ. `ಇನ್ಮುಂದೆ ಹೀಗೆ ಆಗದ ಹಾಗೇ ನೋಡಿಕೊಳ್ಳುವೆ’ ಎಂದು ಅವರು ಭರವಸೆ ನೀಡಿದ್ದಾರೆ.