ಅಂಕೋಲಾದಲ್ಲಿ ನಿರ್ಮಿಸಲು ಉದ್ದೇಶಿಸಿದ ರಿಂಗ್ ರೋಡ್’ಗೆ ಕೇಣಿ ಬಂದರು ನಿರ್ಮಾಣದ ಜವಾಬ್ದಾರಿವಹಿಸಿಕೊಂಡ JSW ಕಂಪನಿ ದುಡ್ಡು ನೀಡುತ್ತಿರುವ ಅನುಮಾನವ್ಯಕ್ತವಾಗಿದೆ. ಸರ್ಕಾರಿ ಯೋಜನೆಗೆ ಖಾಸಗಿ ಕಂಪನಿ ಹಣ ಹೂಡುತ್ತಿರುವ ವಿಷಯ ಕೇಳಿ ಅಲ್ಲಿನ ಜನ ಹೌಹಾರಿದ್ದಾರೆ.
`ಕೇಣಿ ವಾಣಿಜ್ಯ ಬಂದರಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಅಂಕೋಲಾ ತಾಲೂಕಿನ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಿಂಗ್ ರಸ್ತೆ ನಿರ್ಮಿಸಲು ಸಿದ್ಧತೆ ನಡೆಸಲಾಗುತ್ತಿದೆ’ ಎಂದು ಅಲ್ಲಿನವರು ದೂರಿದ್ದಾರೆ. `ಜನರ ಬದುಕು, ಕೃಷಿ ಭೂಮಿ ಮತ್ತು ಮೀನುಗಾರರ ವಸತಿ ಪ್ರದೇಶಗಳಿಗೆ ಧಕ್ಕೆಯಾಗುವ ಸಾಧ್ಯತೆಯಿರುವ ರಿಂಗ್ ರಸ್ತೆ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಲು ಬಿಡುವುದಿಲ್ಲ’ ಎಂದು ಕೇಣಿ ಬಂದರು ವಿರೋಧಿ ಹೋರಾಟ ಸಮಿತಿ ಎಚ್ಚರಿಸಿದೆ. ಸಮಿತಿಯ ಸಂಜೀವ್ ಬಲೇಗಾರ ಅವರು ಈ ಕುರಿತು ಮಾತನಾಡಿದ್ದು, `ಸ್ಥಳೀಯರ ಗಮನಕ್ಕೆ ತಾರದೆ ಯೋಜನೆ ರೂಪಿಸಲಾಗುತ್ತಿದೆ. ಸಾರ್ವಜನಿಕ ಸಭೆ ನಡೆಸಲಾಗಿದೆ ಎಂದು ಅಧಿಕೃತ ದಾಖಲೆಗಳಲ್ಲಿ ಉಲ್ಲೇಖಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ಸಮರ್ಪಕ ಮಾಹಿತಿ ನೀಡದೆ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿರುವುದು ಖಂಡನೀಯ’ ಎಂದರು.
`ಹಿಲ್ಲೂರು ಕ್ರಾಸ್ನಿಂದ ಆರಂಭವಾಗಿ ಬೋಗ್ರಿಬೈಲ್, ಬಾಳೆಗುಳಿ, ಕೃಷ್ಣಾಪುರ, ವಂದಿಗೆ, ಶೆಟ್ಟಿಗೇರಿ, ಸುರ್ವೆ, ಕೋರ್ವೆ, ಬಾಸಗೋಡ, ಬೆಳಂಬಾರ, ನದಿವಾಡ, ಗಾಬೀತಕೇರಿ, ಹರಿಕಂತ್ರವಾಡ, ಕೋಮಾರಪಂಥವಾಡ ಹಾಗೂ ಭಾವಿಕೇರಿ ಸೇರಿದಂತೆ ಹಲವು ಗ್ರಾಮಗಳ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆ ನಕ್ಷೆ ಸಿದ್ಧಪಡಿಸಿದ ಮಾಹಿತಿಯಿದೆ. ಈ ಮಾರ್ಗದಲ್ಲಿ ಮೀನುಗಾರರ ವಸತಿ ಪ್ರದೇಶಗಳು ಹಾಗೂ ಫಲವತ್ತಾದ ಕೃಷಿ ಭೂಮಿಗಳು ಒಳಗೊಳ್ಳಲಿದ್ದು, ನೂರಾರು ಕುಟುಂಬಗಳ ಬದುಕಿಗೆ ಹೊಡೆತ ಬೀಳುವ ಆತಂಕವಿದೆ’ ಎಂದವರು ಕಳವಳವ್ಯಕ್ತಪಡಿಸಿದರು. `ಕೇಣಿ ವಾಣಿಜ್ಯ ಬಂದರು ಯೋಜನೆಗೆ ಸಂಬAಧಿಸಿದAತೆ ಜೆಎಸ್ಡಬ್ಲ್ಯೂ ಕಂಪನಿ ಸಲ್ಲಿಸಿರುವ ಪರಿಸರ ಪರಿಣಾಮ ಮೌಲ್ಯಮಾಪನ ವರದಿಯಲ್ಲಿ ರಿಂಗ್ ರಸ್ತೆ ನಿರ್ಮಾಣದ ಪ್ರಸ್ತಾಪವೇ ಇಲ್ಲ. ಆದರೆ ಇದೀಗ ಏಕಾಏಕಿ ರಿಂಗ್ ರಸ್ತೆ ಯೋಜನೆ ಮುನ್ನೆಲೆಗೆ ಬಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಂದರು ಯೋಜನೆಗೆ ಪೂರಕವಾಗಿ ಈ ರಸ್ತೆ ನಿರ್ಮಿಸಲಾಗುತ್ತಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.
`ಅ 20ರಂದು ಅಂಕೋಲಾ ತಾಲೂಕು ಭವನದಲ್ಲಿ ಐದು ಸಾವಿರ ಸಾರ್ವಜನಿಕರು ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡುವ 880 ಕುಟುಂಬಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಅಂತಹ ಯಾವುದೇ ಸಭೆ ನಡೆದಿರುವುದು ಸ್ಥಳೀಯರ ಗಮನಕ್ಕೆ ಬಂದಿಲ್ಲ. ಸಭೆ ಕರೆದವರು ಯಾರು, ಎಲ್ಲಿ ನಡೆಸಲಾಗಿದೆ ಎಂಬ ಮಾಹಿತಿಯೂ ಲಭ್ಯವಿಲ್ಲ’ ಎಂದರು. `ಯೋಜನೆಗೆ ಆಕ್ಷೇಪಣೆ ಸಲ್ಲಿಸಲು ನವೆಂಬರ್ 2 ಕೊನೆಯ ದಿನವೆಂದು ತಿಳಿಸಲಾಗಿದ್ದರೂ, ಸಾರ್ವಜನಿಕರಿಗೆ ಸಮರ್ಪಕವಾಗಿ ಮಾಹಿತಿ ತಲುಪಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ನೋಟಿಸ್ ಪ್ರಕಟಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅದು ಸತ್ಯವಲ್ಲ’ ಎಂದರು. `ಬಂದರು ಕಾರ್ಯಾರಂಭಿಸಿದ ಬಳಿಕ ದಿನವೊಂದಕ್ಕೆ ಸುಮಾರು 10 ಸಾವಿರ ವಾಹನಗಳು ಸಂಚರಿಸುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಂತಹ ವಾಹನ ಸಂಚಾರದಿAದ ಪರಿಸರ ಮಾಲಿನ್ಯ, ಧೂಳಿನ ಸಮಸ್ಯೆ ಹೆಚ್ಚುವುದಲ್ಲದೆ, ಕೃಷಿ ಮತ್ತು ಮೀನುಗಾರಿಕೆ ವಲಯದ ಮೇಲೂ ದುಷ್ಪರಿಣಾಮ ಉಂಟಾಗಬಹುದು. ಸ್ಥಳೀಯ ಜನರ ಹಿತವನ್ನು ಕಡೆಗಣಿಸಿ ಇಂತಹ ಯೋಜನೆಗಳನ್ನು ರೂಪಿಸುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
`ರಿಂಗ್ ರೋಡ್ ಯೋಜನೆಯನ್ನು ಕೈಬಿಡದಿದ್ದರೆ ನವೆಂಬರ್ ಮೂರನೇ ವಾರದಲ್ಲಿ ಅಂಕೋಲಾದಲ್ಲಿ ಮೀನುಗಾರರು, ರೈತರು ಹಾಗೂ ಸಾರ್ವಜನಿಕರನ್ನು ಒಳಗೊಂಡು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಚಂದ್ರಕಾAತ ಹರಿಕಾಂತ, ಸವಿತಾ ಕಲ್ಮಠ, ಶಂಕರ ಬಲೆಗಾರ, ಗೋವಿಂದ ಗೌಡ, ಕೇಶವ ನಾಯ್ಕ ಬೊಗ್ರಿಬೈಲ್, ನೀಲೇಶ ಹರಿಕಂತ್ರ, ವಿನಾಯಕ ನಾಯ್ಕ ಕೇಣಿ, ಪ್ರಕಾಶ ಗೌಡ, ಗಣೇಶ ಗೌಡ, ಮಧುಕರ ಆಚಾರಿ, ಜಗದೀಶ ಗೌಡ, ಸೋಮೇಶ್ವರ ಭೋವಿ, ಅನಿಲ ತಾಂಡೇಲ, ಶೇಖರ ಹರಿಕಂತ್ರ, ಗಿರೀಶ ಹರಿಕಂತ್ರ ಅವರು ಎಚ್ಚರಿಸಿದರು.