ಮುಂಡಗೋಡಿನ ಕಾತೂರು ಹಾಗೂ ಸುತ್ತಲಿನ ಪ್ರದೇಶಕ್ಕೆ ಲಗ್ಗೆಯಿಟ್ಟ ಆನೆಗಳು ಅಲ್ಲಿನ ಅಡಿಕೆ ಮರಗಳನ್ನು ನೆಲಕ್ಕುರುಳಿಸಿವೆ. ಇದರೊಂದಿಗೆ ಬಾಳೆ-ಭತ್ತವನ್ನು ನೆಲಸಮ ಮಾಡಿವೆ.
ಕಳೆದ ಎರಡು ವಾರದಿಂದ ಸಿಂಗನಹಳ್ಳಿ, ಹುಲಿಹೊಂಡಾ, ಅಟ್ಟಣಗಿ, ಹಾರವಳ್ಳಿ, ರಾಮಾಪುರ ಸೇರಿ ಅನೇಕ ಕಡೆ ಆನೆ ಸಂಚಾರ ಜೋರಾಗಿದೆ. ಅಲ್ಲಿನ ಬಸವರಾಜ ಓಣಿಕೇರಿ, ಚಂದ್ರಕಾoತ ಆಲಳ್ಳಿ, ಚಿಪ್ಪಣ್ಣ ಹರಿಜನ, ಪರಶುರಾಮ ರಾವಳ್, ಯಲ್ಲಪ್ಪಾ ಪಾಟೀಲ್ ಸೇರಿ ಅನೇಕರ ಗದ್ದೆ-ತೋಟಗಳಿಗೆ ಆನೆ ನುಗ್ಗುತ್ತಿದೆ. ಕಾಡಿನಿಂದ ಬರುವ ಆನೆಗಳು ಹೊಲ-ಗದ್ದೆಯ ಮೂರು ದಿಕ್ಕುಗಳಲ್ಲಿ ಸಂಚರಿಸಿ ಹಾನಿ ಮಾಡುತ್ತಿದೆ. ತಾಯಿ ಆನೆಯ ಪಕ್ಕದಲ್ಲಿಯೇ ಮರಿ ಆನೆಗಳು ಓಡಾಡುತ್ತಿವೆ. ಒಟ್ಟು ಮೂರು ಗುಂಪಿನಲ್ಲಿ ಆನೆ ಸಂಚಾರ ನಡೆದಿದೆ.
ಇಲ್ಲಿನ 25ಕ್ಕೂ ಅಧಿಕ ಜಮೀನುಗಳಿಗೆ ಆನೆ ನುಗ್ಗಿದೆ. ಅಲ್ಲಿದ್ದ ಅಡಿಕೆ ಮರಗಳನ್ನು ನಾಶ ಮಾಡಿದೆ. ಫಸಲು ಬರುವ ಹೊತ್ತಿನಲ್ಲಿದ್ದ ಮರಗಳು ನಾಶವಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಈ ವರ್ಷ ಬರ ಪರಿಸ್ಥಿತಿ ಎದುರಾಗಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿ ಭತ್ತದ ಗದ್ದೆಗಳು ಆನೆಗಳಿಗೆ ಆಹಾರವಾಗಿದೆ. `ಆನೆಗಳನ್ನು ಕಾಡಿಗೆ ಅಟ್ಟಬೇಕು. ರೈತರಿಗೆ ನ್ಯಾಯ ಕೊಡಿಸಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.