ಅಡಿಕೆ ತೋಟಕ್ಕೆ ನೀರು ಬಿಡಲು ಹೋಗಿದ್ದ ಗುರುರಾಜ ಗುತ್ತೆಪ್ಪನವರ ಅವರಿಗೆ ಚಿರತೆ ಕಾಣಿಸಿದೆ. ಚಿರತೆ ನೋಡಿ ಹೆದರಿದ ಅವರು ಸಮೀಪದಲ್ಲಿದ್ದ ಮರ ಹತ್ತಿದ್ದು, ಮರದಿಂದ ಇಳಿಯಲಾಗದೇ ಪೊಲೀಸರಿಗೆ ಫೋನ್ ಮಾಡಿದ್ದಾರೆ!
ಮುಂಡಗೋಡಿನ ಪೊಲೀಸ್ ವಾಹನಕ್ಕೆ ಗುರುರಾಜ ಗುತ್ತೆಪ್ಪನವರ್ ಅವರು ಚಾಲಕರಾಗಿದ್ದಾರೆ.ನ್ಯಾಸರ್ಗಿ ಬಳಿ ಅವರು ತೋಟ ಹೊಂದಿದ್ದಾರೆ. ರಾತ್ರಿ ವೇಳೆ ಅವರು ತೋಟಕ್ಕೆ ನೀರು ಬಿಡಲು ಹೋಗಿದ್ದು, ನ್ಯಾಸರ್ಗಿ ಬಸಪ್ಪನ ಗುಡಿ ಬಳಿಯ ರಸ್ತೆ ಪಕ್ಕದಲ್ಲಿ ಚಿರತೆ ಕಾಣಿಸಿದೆ. ಚಿರತೆ ಬಗ್ಗೆ ಅರಿವಿಲ್ಲದೇ ಅವರು ಮುಖಕ್ಕೆ ಬ್ಯಾಟರಿ ಹೊಡೆದಿದೆ. ಆಗ, ಗುರುರಾಜ ಗುತ್ತೆಪ್ಪನವರ್ ಅವರನ್ನು ನೋಡಿದ ಚಿರತೆ ದೊಡ್ಡದಾಗಿ ಘರ್ಜಿಸಿದೆ. ಆ ಘರ್ಜನೆಗೆ ಅವರು ಹೆದರಿದ್ದಾರೆ. ತಕ್ಷಣ ಪಕ್ಕದಲ್ಲಿದ್ದ ಬೇಲಿ ಹಾರಿದ ಗುರುರಾಜ ಗುತ್ತೆಪ್ಪನವರ್ ಅವರು ಅನತಿ ದೂರದಲ್ಲಿದ್ದ ಮರ ಹತ್ತಿ ಪ್ರಾಣ ಉಳಿಸಿಕೊಂಡಿದ್ದಾರೆ.
ಕೆಲ ಸಮಯದ ನಂತರ ಚಿರತೆ ಅಲ್ಲಿಂದ ಹೊರಟಿದ್ದು, ಗುರುರಾಜ್ ಗುತ್ತೆಪ್ಪನವರ್ ಅವರು ಮರದಿಂದ ಕೆಳಗಿಳಿಯಲು ನೋಡಿದ್ದಾರೆ. ಚಿರತೆ ನೋಡಿದ ಭಯಕ್ಕೆ ಬಹು ಎತ್ತರಕ್ಕೆ ಹೋಗಿದ್ದ ಅವರಿಗೆ ಇಳಿಯಲು ಸಾಧ್ಯವಾಗಿಲ್ಲ. ರಾತ್ರಿ 9.30ರ ವೇಳೆಗೆ ಈ ಘಟನೆ ನಡೆದಿದ್ದರಿಂದ ಅಲ್ಲಿ ಗುರುರಾಜ್ ಗುತ್ತೆಪ್ಪನವರ್ ಅವರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಸಾಕಷ್ಟು ಬಾರಿ ಕೂಗಿದರೂ ಅಲ್ಲಿ ಸಹಾಯಕ್ಕೆ ಯಾರೂ ಬರಲಿಲ್ಲ. ದೊಡ್ಡ ಬೊಬ್ಬೆ ಹೊಡೆದರೂ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಆ ರಾತ್ರಿಯ ನಿರ್ಜನ ಪ್ರದೇಶವೂ ಗುರುರಾಜ್ ಗುತ್ತೆಪ್ಪನವರ್ ಅವರಿಗೆ ಇನ್ನಷ್ಟು ಭಯ ತರಿಸಿದೆ.
ಮರದ ಮೇಲಿದ್ದ ಗುರುರಾಜ್ ಗುತ್ತೆಪ್ಪನವರ್ ಅವರ ಮೊಬೈಲಿನಲ್ಲಿ ಒಮ್ಮೆ ಸಿಗ್ನಲ್ ಕಾಣಿಸಿದೆ. ತಕ್ಷಣ ಅವರು ಮುಂಡಗೋಡು ಪಿಸೈ ಮಂಜುನಾಥ ಗೌಡರ ಅವರಿಗೆ ಫೋನ್ ಮಾಡಿದ್ದಾರೆ. `ಚಿರತೆ ನೋಡಿ ಮರ ಹತ್ತಿದ್ದೇನೆ. ಕೆಳಗೆ ಇಳಿಯಲು ಆಗುತ್ತಿಲ್ಲ. ಸಹಾಯ ಮಾಡಿ’ ಎಂದು ಒಂದೇ ಉಸಿರಿನಲ್ಲಿ ಅವರು ವಿವರಿಸಿದ್ದಾರೆ. ಈ ವಿಷಯ ಅರಿತು ಪೊಲೀಸರು ಗುರುರಾಜ್ ಗುತ್ತೆಪ್ಪನವರ್ ಅವರನ್ನು ಹುಡುಕುತ್ತ ಹೋಗಿದ್ದಾರೆ. ಮರದ ಮೇಲಿದ್ದ ಗುರುರಾಜ್ ಗುತ್ತೆಪ್ಪನವರ್ ಅವರು ಪೊಲೀಸರನ್ನು ಕಂಡು ಕೂಗಿದ್ದು, ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.
`ನ್ಯಾಸರ್ಗಿ ಮತ್ತು ಕುಂದರ್ಗಿ ಭಾಗದಲ್ಲಿ ಚಿರತೆ ಓಡಾಡ ಹೆಚ್ಚಾಗಿದೆ. ಈ ಮೊದಲು ಬೈಕಿನಲ್ಲಿ ಹೋಗುವವರೊಬ್ಬರ ಮೇಲೆ ಚಿರತೆ ಆಕ್ರಮಣಕ್ಕೆ ಮುಂದಾಗಿತ್ತು. ಈಗ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಮುಂಜಾನೆ ಹಾಗೂ ರಾತ್ರಿ ಸಂಚರಿಸುವುದು ಅಪಾಯಕಾರಿ’ ಎಂದು ಅಲ್ಲಿನವರು ಹೇಳಿದ್ದಾರೆ.