ನದಿ ಜೋಡಣೆ ವಿರೋಧಿಸಿ ನವೆಂಬರ್ 3ರಂದು ಯಲ್ಲಾಪುರದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ಈ ಪ್ರತಿಭಟನೆಯಲ್ಲಿ 20 ಸಾವಿರಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆಯಿದೆ. ಶಿರಸಿಯಿಂದಲೇ ಪ್ರತಿಭಟನೆಗೆ 10 ಸಾವಿರಕ್ಕೂ ಅಧಿಕ ಜನ ಆಗಮಿಸುವ ಸಾಧ್ಯತೆಗಳಿವೆ.
ಬೇಡ್ತಿ-ವರದಾ ನದಿ ಜೋಡಣೆ ವಿಷಯವಾಗಿ ಶಿರಸಿಯಲ್ಲಿ ಮೊದಲಿನಿಂದಲೂ ಜನಾಂದೋಲನ ನಡೆದಿದೆ. ಅತ್ಯಂತ ಅಚ್ಚುಕಟ್ಟಾಗಿ ಅಲ್ಲಿ ಹೋರಾಟದ ರೂಪುರೇಷೆಗಳನ್ನು ಮಾಡಲಾಗಿದೆ. ಹಂತ ಹಂತದಲ್ಲಿಯೂ ಪ್ರಾಥಮಿಕ ಸಂಘಟನೆಗಳ ಮೂಲಕ ಮನೆ ಮನೆಗೆ ವಿಷಯ ಮುಟ್ಟಿಸಲಾಗಿದೆ. ಇದರೊಂದಿಗೆ ಅವೈಜ್ಞಾನಿಕ ಯೋಜನೆಯ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಕೆಲಸ ನಡೆದಿದೆ. ನದಿ ಜೋಡಣೆಯ ದುಷ್ಪರಿಣಾಮಗಳು ನೇರವಾಗಿ ಶಿರಸಿಯ ಅನೇಕ ಗ್ರಾಮೀಣ ಭಾಗಕ್ಕೆ ತಾಗಲಿದ್ದು, ಆ ಬಗ್ಗೆ ಅಲ್ಲಿನ ಎಲ್ಲರಿಗೂ ಅರಿವಿದೆ.
ಸೋಂದಾದ ಸ್ವರ್ಣವಲ್ಲಿ ಗಂಗಾಧರೇAದ್ರ ಸರಸ್ವತೀ ಶ್ರೀಗಳು ಈ ಹೋರಾಟಕ್ಕೆ ಕರೆ ನೀಡಿದ್ದು, ಪರಿಸರ ಉಳಿಸುವ ನಿಟ್ಟಿನಲ್ಲಿ ಶಿರಸಿಯ ಜನ ಪ್ರತಿಭಟನೆಗೆ ಸಂಕಲ್ಪಿಸಿದ್ದಾರೆ. ಶ್ರೀಗಳ ನುಡಿಯಂತೆ ಅಲ್ಲಿನ ಹೋರಾಟಗಾರರು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಸಂಘಟಕರು ಪ್ರತಿ ಮನೆ ಭೇಟಿ ಮಾಡಿ ಅವರಿಗೆ ಹೋರಾಟದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿದ್ದಾರೆ. ಪ್ರತಿ ಮನೆಯಲ್ಲಿರುವವರು ತಮ್ಮಲ್ಲಿರುವ ಕಾರು-ಬೈಕುಗಳಲ್ಲಿ ತಮ್ಮೊಂದಿಗೆ ಇನ್ನಿತರರನ್ನು ಹೋರಾಟಕ್ಕೆ ಕರೆತರುವ ಬಗ್ಗೆ ಮನವಿ ಮಾಡಿದ್ದಾರೆ. ಈ ಹಿನ್ನಲೆ ಅಲ್ಲಿನ ಜನರು ನವೆಂಬರ್ 3ರ ಹೋರಾಟಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಶಿರಸಿ ನಗರದಲ್ಲಿಯೂ ಅನೇಕರು ಸಾಲು ಸಾಲಾಗಿ ಬೈಕು-ಕಾರುಗಳ ಮೂಲಕ ಯಲ್ಲಾಪುರಕ್ಕೆ ಬರುವ ಬಗ್ಗೆ ಮಾತನಾಡಿದ್ದಾರೆ. ನದಿ ತಿರುವು ಯೋಜನೆ ಶಾಶ್ವತವಾಗಿ ರದ್ಧಾಗಬೇಕು ಎಂದು ಹೋರಾಟ ನಡೆಸುತ್ತಿದ್ದು, ಎಲ್ಲಿಯೇ ಕರೆದರೂ ಪ್ರತಿಭಟನೆಗೆ ಬರಲು ಸಿದ್ಧ ಎಂದು ಅಲ್ಲಿನವರು ಹೇಳಿದ್ದಾರೆ.