ಬೇಡ್ತಿ-ವರದಾ ನದಿ ತಿರುವು ಯೋಜನೆ ವಿರೋಧಿಸಿ ಯಲ್ಲಾಪುರದಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ನೆರೆದಿದ್ದ ಸಾವಿರಾರು ಜನರ ಎದುರೇ ವಿಜ್ಞಾನಿ ಬಿ ಎಂ ಕುಮಾರಸ್ವಾಮಿ ಹಾಗೂ ಶಾಸಕ-ಸಂಸದರ ನಡುವೆ ಜಟಾಪಟಿ ನಡೆದಿದೆ. ವಿಜ್ಞಾನಿ ಬಿ ಎಂ ಕುಮಾರಸ್ವಾಮಿ ಅವರು ಜನಪ್ರತಿನಿಧಿಗಳ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ್ದು, ವೇದಿಕೆಯಲ್ಲಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಭೀಮಣ್ಣ ನಾಯ್ಕ ಅವರು ಆ ಮಾತುಗಳನ್ನು ತಕ್ಷಣ ಖಂಡಿಸಿದ್ದಾರೆ. ಬಿ ಎಂ ಕುಮಾರಸ್ವಾಮಿ ಅವರ ನಡೆಯ ಬಗ್ಗೆ ಆ ಮೂವರು ಜನಪ್ರತಿನಿಧಿಗಳು ಅಸಮಧಾನವ್ಯಕ್ತಪಡಿಸಿದ್ದಾರೆ.
ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಯಲ್ಲಾಪುರದ ಟಿಎಂಎಸ್ ಎದುರು ಮಂಗಳವಾರ ಬೆಳಗ್ಗೆ ಬಹಿರಂಗ ಸಭೆ ನಡೆದಿದೆ. ಅದಾದ ನಂತರ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಸಂಕಲ್ಪ ಹೊಟೇಲ್ ಎದುರು ಜಮಾಯಿಸಿದ್ದಾರೆ. ಅಲ್ಲಿ ರಾಷ್ಟಿಯ ಹೆದ್ದಾರಿ ತಡೆ ನಡೆಸಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ವೇಳೆ ಭಾಷಣ ಮಾಡಿದ ವಿಜ್ಞಾನಿ ಬಿ ಎಂ ಕುಮಾರಸ್ವಾಮಿ ಅವರು ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದಾರೆ. `ಇಲ್ಲಿ ಭಾಷಣ ಮಾಡುವ ಜನಪ್ರತಿನಿಧಿಗಳು ಕೇವಲ ಭರವಸೆ ಮಾತ್ರ ನೀಡುತ್ತಿದ್ದು, ತಮ್ಮ ನಿಲುವುವ್ಯಕ್ತಪಡಿಸುತ್ತಿಲ್ಲ. ಅವರೆಲ್ಲರೂ ಅಸಹಾಯಕರ ರೀತಿ ವರ್ತಿಸಿದ್ದಾರೆ’ ಎಂದು ಬಿ ಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ. `ನಿಮ್ಮ ರಾಜಕೀಯ ಭವಿಷ್ಯ ಸರಿಯಾಗಿ ನಡೆಯಬೇಕು ಎಂದರೆ ಸ್ಪಷ್ಟ ನಿಲುವು ಪ್ರಕಟಿಸಿ’ ಎಂದು ವಿಜ್ಞಾನಿ ಬಿ ಎಂ ಕುಮಾರಸ್ವಾಮಿ ಅವರು ತಮ್ಮ ಮಾತು ಮುಂದುವರೆಸಿದ್ದಾರೆ. `ಈ ತರ ಮಾತನಾಡುವುದು ಸರಿಯಲ್ಲ. ಅದನ್ನು ನಿಲ್ಲಿಸಿ’ ಎಂದು ವೇದಿಕೆ ಹಿಂದಿದ್ದವರು ಸೂಚಿಸಿದ್ದು, ಅದನ್ನು ಪಾಲಿಸದೇ ಬಿ ಎಂ ಕುಮಾರಸ್ವಾಮಿ ಅವರು ಮಾತು ಮುಂದುವರೆಸಿದ್ದಾರೆ. `ನಾನು ಮಾತನಾಡುವುದೇ ಒರಟು. ಅದನ್ನು ಸಹಿಸಿಕೊಳ್ಳಬೇಕು’ ಎಂದು ಸಹ ಬಿ ಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ಶಿವರಾಮ ಹೆಬ್ಬಾರ್ ಅವರು `ನಿಮ್ಮ ಒರಟು ಮಾತುಗಳು ನಮಗೆ ಬೇಡ. ವಾಸ್ತವ ವಿಷಯದ ಬಗ್ಗೆ ಮಾತನಾಡಿ’ ಎಂದು ಹೇಳಿದ್ದಾರೆ. ಶಾಸಕ ಭೀಮಣ್ಣ ನಾಯ್ಕ ಅವರು ಸಹ ಅಸಮಧಾನವ್ಯಕ್ತಪಡಿಸಿ `ಇಂಥ ಮಾತು ಕೇಳಲು ನಾವು ಇಲ್ಲಿ ಬಂದಿಲ್ಲ’ ಎಂದಿದ್ದಾರೆ. ಅದಾದ ನಂತರ ಮೈಕ್ಪಡೆದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು `ಜನರ ವಿಶ್ವಾಸಗಳಿಸಿಯೇ ನಾವು ಜನಪ್ರತಿನಿಧಿಯಾಗಿದ್ದು, ಜನರ ಉಳಿಸಿಕೊಳ್ಳುವುದು ವಿಜ್ಞಾನಿಯಾದ ತಮಗಿಂತಲೂ ನಮಗೆ ಮುಖ್ಯ. ನೀವು ಒಂದು ದಿನ ಬಂದು ಭಾಷಣ ಮಾಡಿ ಹೋಗುವವರು ಎಂದು ಜನ ಮಾತನಾಡಬಾರದು ಎಂದಾದರೆ ನೀವು ಸಹ ತಮ್ಮ ಹಿರಿತನದ ಪ್ರಭಾವ ಬೀರಿ ಯೋಜನೆ ನಿಲ್ಲಿಸಬೇಕು’ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು `ಇಂಥ ಅವೈಜ್ಞಾನಿಕ ಯೋಜನೆಗಳು ಜಾರಿಯಾಗಬೇಕು ಎಂದು ಶಿಫಾರಸ್ಸು ಮಾಡುವವರೇ ನಿಮ್ಮಂಥ ವಿಜ್ಞಾನಿಗಳು. ನಂತರ ಆ ಯೋಜನೆ ಬೇಡ ಎಂದು ಭಾಷಣ ಮಾಡುವವರು ಅವರೇ. ಇದರಿಂದ ಜನಪ್ರತಿನಿಧಿಗಳಿಗೂ ಗೊಂದಲವಾಗುತ್ತಿದ್ದು, ನಾವು ಎಂದಿಗೂ ಜನರ ಧ್ವನಿಯಾಗಿರುತ್ತೇವೆ. ನದಿ ಜೋಡಣೆ ವಿರುದ್ಧ ದೆಹಲಿಗೆ ನಿಯೋಗ ತೆಗೆದುಕೊಂಡು ಹೊಗಿ ಐದು ಸಚಿವರಿಗೆ ಮನವಿ ನೀಡಲಾಗಿದೆ. ಈ ಬಗ್ಗೆ ಅಧಿವೇಶನದಲ್ಲಿಯೂ ಮಾತನಾಡಲಾಗಿದೆ. ಇನ್ನು ಮುಂದೆಯೂ ಗುರುಗಳ ನಿರ್ದೇಶನದ ಮೇರೆಗೆ ನಾವು ನಡೆಯುತ್ತಿದ್ದು, ವಿಜ್ಞಾನಿಗಳಾದ ತಾವು ಎಲ್ಲೆಲ್ಲಿ? ಏನೇನು ಪ್ರಭಾವ ಬಿರಿದ್ದೀರಿ? ಎಂದು ಪ್ರಶ್ನಿಸಿದರು. ತಮ್ಮ ಹಿರಿತನದ ಪ್ರಭಾವ ಬೀರಿ ಯೋಜನೆಯನ್ನು ನಿಲ್ಲಿಸಿ’ ಎಂದು ಒತ್ತಾಯಿಸಿದರು. ಮೈಕ್ ಪಡೆದು ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ್ ಅವರು `ಬಿ ಎಂ ಕುಮಾರಸ್ವಾಮಿ ಅವರು ತಮ್ಮ ಅನುಭವದ ಆಧಾರದಲ್ಲಿ ಜನರಿಗೆ ಉಪದೇಶ ಮಾಡಲಿ. ಆದರೆ, ಜನಪ್ರತಿನಿಧಿಗಳು ಏನೂ ಅಲ್ಲ ಎಂಬ ಮಾತನ್ನು ಒಪ್ಪುವುದಿಲ್ಲ. ಎಲ್ಲಾ ಜನಪ್ರತಿನಿಧಿಗಳು ಒಂದಾಗಿ ನದಿ ತಿರುವು ಯೋಜನೆ ವಿರುದ್ಧ ಹೋರಾಟ ಮಾಡುತ್ತಿದ್ದೇವೆ’ ಎಂದು ಹೇಳಿದರು. `ಹಾವೇರಿಯಲ್ಲಿರುವ ಶಿವರಾಮ ಹೆಬ್ಬಾರ್ ಕುಟುಂಬದವರ ಕಾರ್ಖಾನೆಗೆ ನೀರು ಒದಗಿಸಲು ಈ ಯೋಜನೆ ರೂಪಿಸಲಾಗುತ್ತಿದೆ ಎಂದು ಕೆಲವರು ಅಪಪ್ರಚಾರ ಮಾಡಿದ್ದಾರೆ. ಆ ಕಾರ್ಖಾನೆಗೂ ಈ ಯೋಜನೆಗೂ ಯಾವುದೇ ಸಂಬoಧವಿಲ್ಲ’ ಎಂದು ಸಹ ಶಿವರಾಮ ಹೆಬ್ಬಾರ್ ಅವರು ಜನರ ಎದುರು ಸ್ಪಷ್ಠಪಡಿಸಿದರು. `ಚುನಾವಣೆ ಬಂದಾಗ ರಾಜಕಾರಣ ಮಾಡಬೇಕು. ಆದರೆ, ಶ್ರೀಗಳ ನೇತ್ರತ್ವದಲ್ಲಿ ನಡೆಯುವ ಹೋರಾಟದಲ್ಲಿ ರಾಜಕಾರಣ ಮಾಡಲು ಬರಬಾರದು’ ಎಂದು ಶಿವರಾಮ ಹೆಬ್ಬಾರ್ ಅವರು ಆಕ್ರೋಶದಿಂದ ಮಾತನಾಡಿದರು.
`ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಘೋಷಣೆ ಆಗುವ ಮುನ್ನ ಇಲ್ಲಿನ ಭೂಮಿಯ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಬೇಕು’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರತಿಪಾದಿಸಿದರು. `ಬೇಡ್ತಿ-ವರದಾ ನದಿ ಜೋಡಣೆ ವಿರೋಧದ ಜೊತೆ ಶರಾವತಿ ಪಂಪ್ ಸ್ಟೋರೇಜ್ ಯೋಜನೆಯನ್ನು ಜನ ವಿರೋಧಿಸಬೇಕು. ಶರಾವತಿ ಯೋಜನೆ ಬಗ್ಗೆ ಯಾರೂ ಮಾತನಾಡದಿದ್ದರೂ ತಾವು ಅದರ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದೇನೆ’ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ಹೇಳಿದರು. `ಈ ವಿಷಯದ ಬಗ್ಗೆ ಎಲ್ಲರೂ ಸೇರಿ ಅಧಿವೇಶನದಲ್ಲಿ ಮಾತನಾಡೋಣ’ ಎಂದು ದಿನಕರ ಶೆಟ್ಟಿ ಅವರು ಒತ್ತಾಯಿಸಿದರು. `ಉತ್ತರ ಕನ್ನಡ ಜಿಲ್ಲೆಯವರಿಗೆ ಕುಡಿಯಲು ನೀರಿಲ್ಲ. ಹೀಗಿರುವಾಗ, ಇಲ್ಲಿನ ನೀರನ್ನು ಬೇರೆಡೆ ಒಯ್ಯಲು ಹೇಗೆ ಸಾಧ್ಯ?’ ಎಂದು ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಪ್ರಶ್ನಿಸಿದರು. `ಈ ಅವೈಜ್ಞಾನಿಕ ಯೋಜನೆಯ ಬಗ್ಗೆ ಎಲ್ಲಾ ಜನಪ್ರತಿನಿಧಿಗಳು ಸೇರಿ ಮತ್ತೊಮ್ಮೆ ಮುಖ್ಯಮಂತ್ರಿಗಳ ಬಳಿ ಚರ್ಚಿಸುತ್ತೇವೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮುಂದಾಳತ್ವದಲ್ಲಿ ನಿಯೋಗ ರಚಿಸಿ ಹೋರಾಟ ನಡೆಸುತ್ತೇವೆ’ ಎಂದು ಭೀಮಣ್ಣ ನಾಯ್ಕ ಅವರು ಘೋಷಿಸಿದರು.