ಬೇಡ್ತಿ-ವರದಾ ಯೋಜನೆ ವಿರೋಧಿಸಿ ಯಲ್ಲಾಪುರದಲ್ಲಿ ನಡೆದ ಪ್ರತಿಭಟನೆಗೆ ಬರುತ್ತಿದ್ದ ವನಿತಾ ಆಗೇರ್ ಹಾಗೂ ಶಿವಾನಂದ ಆಗೇರ್ ಅವರು ಅಪಘಾತದಲ್ಲಿ ಗಾಯಗೊಂಡಿದ್ದು, ಇದನ್ನು ನೋಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ರಕ್ತದ ಮಡವಿನಲ್ಲಿ ಬಿದ್ದಿದ್ದ ಅವರಿಬ್ಬರನ್ನು ತಮ್ಮದೇ ಕಾರಿನಲ್ಲಿ ಕೂರಿಸಿಕೊಂಡ ಅವರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಅವೈಜ್ಞಾನಿಕ ನದಿ ತಿರುವು ಯೋಜನೆ ವಿರುದ್ಧ ಯಲ್ಲಾಪುರದಲ್ಲಿ ಮಂಗಳವಾರ ಭಾರೀ ಪ್ರಮಾಣದ ಪ್ರತಿಭಟನೆ ನಡೆದಿದೆ. ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಹಂಡ್ರಮನೆ ಬಳಿಯ ವನಿತಾ ಆಗೇರ್ ಹಾಗೂ ಶಿವಾನಂದ ಆಗೇರ್ ಅವರು ಮನೆಯಿಂದ ಹೊರಟಿದ್ದಾರೆ. ಆದರೆ, ಯಲ್ಲಾಪುರದ ಮಳಲಗಾಂವ್ ಬಳಿ ಅವರು ಹೊರಟಿದ್ದ ಬೈಕು ಅಪಘಾತಕ್ಕೀಡಾಗಿದೆ. ಬೇಡ್ತಿ ವರದಾ ನದಿ ಜೋಡಣೆಯ ಪ್ರತಿಭಟನೆಗೆ ಬರುತ್ತಿದ್ದ ಮತ್ತೊಂದು ಬೈಕು ಅವರಿಗೆ ಗುದ್ದಿದ್ದು, ಅಪಘಾತಕ್ಕೆ ಕಾರಣರಾದ ಬೈಕಿನವರು ಅಲ್ಲಿಂದ ಹೋಗಿದ್ದಾರೆ. ಅದಾದ ನಂತರ ಆ ಮಾರ್ಗದಲ್ಲಿ ಅನೇಕ ವಾಹನ ಓಡಾಟ ನಡೆದಿದ್ದರೂ ಯಾರೂ ಅವರ ಸಹಾಯಕ್ಕೆ ಬಂದಿಲ್ಲ. ಏಕಕಾಲಕ್ಕೆ ನೂರಾರು ಬೈಕುಗಳು ಬರುತ್ತಿದ್ದ ಕಾರಣ ಸಣ್ಣ ಅಪಘಾತವನ್ನು ಯಾರೂ ದೊಡ್ಡದಾಗಿ ಪರಿಗಣಿಸಿಲ್ಲ.
ಆ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅದೇ ಮಾರ್ಗವಾಗಿ ಸಂಚರಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ರಸ್ತೆ ಮೇಲೆ ಬಿದ್ದಿದ್ದ ಅವರನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೋಡಿದ್ದಾರೆ. ತಕ್ಷಣ ಕಾರು ನಿಲ್ಲಿಸಿದ ಅವರು ರಕ್ತದ ಮಡುವಿನಲ್ಲಿದ್ದ ಮಹಿಳೆಯನ್ನು ಕಾರಿನೊಳಗೆ ಕೂರಿಸಿದ್ದಾರೆ. ಶಿವಾನಂದ ಆಗೇರ್ ಅವರು ಜೊತೆಗೆ ಬಂದಿದ್ದು, ಅವರಿಬ್ಬರನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಪಘಾತದ ರಭಸಕ್ಕೆ ಹಲ್ಲುಗಳನ್ನು ಮುರಿದುಕೊಂಡು ಗಾಯಗೊಂಡಿದ್ದ ವನಿತಾ ಆಗೇರ್ ಅವರಿಗೆ ಸಂಸದರು ಖುದ್ದು ನಿಂತು ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರ ಬಳಿ ಮಾತನಾಡಿ ಶಿವಾನಂದ ಆಗೇರ್ ಅವರಿಗೂ ವೈದ್ಯಕೀಯ ನೆರವು ಕೊಡಿಸಿದ್ದಾರೆ.