ಉಚಿತ ಊಟ-ವಸತಿಯ ಜೊತೆ ಕೈ ತುಂಬ ಸಂಬಳ ಬರುವ ಉದ್ಯೋಗಕೊಡಿಸುವುದಾಗಿ ಹೇಳಿ ವ್ಯಕ್ತಿಗಳಿಬ್ಬರು ಶಿರಸಿ ನೆಹರುನಗರದ ಸುಲ್ತಾನಾ ಭಾಷಾ ಅವರಿಂದ 5 ಲಕ್ಷ ರೂ ವಸೂಲಿ ಮಾಡಿದ್ದಾರೆ. ನಂತರ ರಷ್ಯಾದಲ್ಲಿ ಕಡಿಮೆ ಸಂಬಳದ ಕೆಲಸ ಕೊಡಿಸಿ ಮೋಸ ಮಾಡಿದ್ದಾರೆ.
ಶಿರಸಿಯ ನೆಹರುನಗರದಲ್ಲಿ ಸುಲ್ತಾನ್ ಭಾಷಾ ಹಜರತ್ ಅಲಿ ಗೌಂಡಿ ಅವರು ವಾಸವಾಗಿದ್ದಾರೆ. 23 ವರ್ಷದ ಅವರು ವಿದ್ಯಾರ್ಥಿಯಾಗಿದ್ದು, ಭವಿಷ್ಯದ ಬಗ್ಗೆ ಅಪಾರ ಕನಸು ಕಂಡುಕೊAಡಿದ್ದಾರೆ. ವಿದೇಶಕ್ಕೆ ಹೋಗಿ ಉದ್ಯೋಗ ಮಾಡಬೇಕು ಎಂದು ಬಯಸಿದ ಅವರು ಭಟ್ಕಳ ಮುರುಡೇಶ್ವರ ಬಸ್ತಿಮಕ್ಕಿಯ ಮಹಮದ್ ಕಾಶಿಫ್ ಮಹಮದ್ ಹುಸೇನ್ ಸಯ್ಯದ್ ಅವರ ಬಲೆಗೆ ಬಿದ್ದಿದ್ದಾರೆ. ಮಹಮದ್ ಕಾಶಿಫ್ ಅವರು ವಿದೇಶದಲ್ಲಿ ಉತ್ತಮ ಸಂಬಳದ ಉದ್ಯೋಗ ಕೊಡಿಸುವುದಾಗಿ ಹೇಳಿ ಹಂತ ಹಂತವಾಗಿ 5 ಲಕ್ಷ ರೂ ವಸೂಲಿ ಮಾಡಿದ್ದಾರೆ. ಇದಕ್ಕೆ ತೆಲಂಗಾಣದ ಸಯ್ಯದ್ ಅತಿಕ್ ಸಯ್ಯದ್ ರಫೀಕ್ ಅವರು ಕೈ ಜೋಡಿಸಿದ್ದಾರೆ.
ಮೊದಲು ಮಲೇಷಿಯಾದಲ್ಲಿ ಕೆಲಸ ಇದೆ ಎಂದು ನಂಬಿಸಿದ ಮಹಮದ್ ಕಾಶಿಫ್ ಅವರು ಮಲೆಷಿಯಾದಿಂದಲೇ ವಾಟ್ಸಪ್ ಕಾಲ್ ಮಾಡಿ ನಂಬಿಕೆ ಹುಟ್ಟಿಸಿದ್ದಾರೆ. ಅದಾದ ನಂತರ ಸಯ್ಯದ್ ಅತಿಕ್ ಅವರು ಫೋನ್ ಮಾಡಿ `ರಷ್ಯಾದಲ್ಲಿ ಇನ್ನೂ ದೊಡ್ಡ ಕೆಲಸವಿದೆ. ಡಾಲರ್ ಲೆಕ್ಕದಲ್ಲಿ ಸಂಬಳ ಸಿಗುತ್ತದೆ’ ಎಂದು ಹೇಳಿದ್ದಾರೆ. ಉತ್ತಮ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ನಿರ್ಧರಿಸಿದ್ದ ಸುಲ್ತಾನಾ ಭಾಷಾ ಅವರು ಅವರು ಹೇಳಿದ ಪ್ರಕಾರ ಹಣ ಕೊಡಲು ಒಪ್ಪಿದ್ದಾರೆ. ಮೊದಲು 70 ಸಾವಿರ ರೂ ಫೋನ್ ಫೇ ಮಾಡಿದ್ದಾರೆ. ನಂತರ 3.30 ಲಕ್ಷ ರೂ ವರ್ಗಾಯಿಸಿದ್ದಾರೆ. ಅದಾದ ನಂತರ ಮಹಮದ್ ಕಾಶಿಫ್ ಅವರು ಶಿರಸಿಗೆ ಬಂದು 1.70 ಲಕ್ಷ ರೂ ಹಣಪಡೆದಿದ್ದಾರೆ.
ಈ ಎಲ್ಲದರ ನಡುವೆ ಸುಲ್ತಾನ್ ಭಾಷಾ ಅವರು ಭಟ್ಕಳದ ಸ್ನೇಹಿತ ಭಟ್ಕಳದ ಶಾಬಾಜ ಅವರ ಮೂಲಕ ಪಾಸ್ ಪೋರ್ಟ ತರಿಸಿಕೊಂಡಿದ್ದಾರೆ. 2026ರ ಏಪ್ರಿಲ್ ಅವಧಿಯಲ್ಲಿ ಅವರಿಗೆ ಫೋನ್ ಮಾಡಿದ ವಂಚಕರಿಬ್ಬರು `ದೆಹಲಿಯಿಂದ ರಷ್ಯಾಗೆ ಹೋಗಲು ವಿಮಾನದ ಟಿಕೆಟ್ ಬುಕ್ ಆಗಿದೆ’ ಎಂದಿದ್ದಾರೆ. ದೆಹಲಿಗೆ ಹೋಗಿ ವೀಸಾ ನೋಡಿದ ನಂತರ ಕಡಿಮೆ ಸಂಬಳಕ್ಕೆ ರಷ್ಯಾಗೆ ಕಳುಹಿಸುತ್ತಿರುವುದು ಸುಲ್ತಾನ್ ಭಾಷಾ ಅವರ ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಮಹಮದ್ ಕಾಶಿಫ್ ಅವರು ಜಗಳ ಶುರು ಮಾಡಿದ್ದಾರೆ. ಸಯ್ಯದ್ ಅತಿಕ್ ಫೋನ್’ಗೆ ಸಿಕ್ಕಿಲ್ಲ. ಮೋಸ ಹೋದ ಬಗ್ಗೆ ಸುಲ್ತಾನ್ ಭಾಷಾ ಅವರು ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾರೆ.