ಮಂಗಳವಾಡದ ಫಕೀರಪ್ಪ ಮೇತ್ರಿ ಅವರು ಹಳಿಯಾಳ ಪೊಲೀಸ್ ಠಾಣೆ ಎದುರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸ್ ಠಾಣೆಗೆ ಬಂದ ಅವರು ತಮ್ಮ ಮಗಳ ಮೇಲೆ ಸೀಮೆಎಣ್ಣೆ ಸುರಿದಿದ್ದು, ನಂತರ ತಾವೂ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡಿದ್ದಾರೆ.
ಹಳಿಯಾಳದ ಮಂಗಳವಾಡದಲ್ಲಿ ಫಕೀರಪ್ಪ ರಾಮು ಮೇತ್ರಿ ಅವರು ವಾಸವಾಗಿದ್ದಾರೆ. ಫಕೀರಪ್ಪ ಮೇತ್ರಿ ಅವರು ಹವಗಿ ಗ್ರಾಮದ ವೆಂಕಟೇಶ್ ಕೋರವರ್ ಅವರ ಅಂಗಡಿಗೆ ಹೋಗಿ ಚಹಾ ಕುಡಿದಿದ್ದಾರೆ. ಅದಾದ ನಂತರ ಚಿಲ್ಲರೆ ಇಲ್ಲದ ಕಾರಣ `ದುಡ್ಡು ಆಮೇಲೆ ಕೊಡುವೆ’ ಎಂದಿದ್ದಾರೆ. ಆಗ, ವೆಂಕಟೇಶ ಕೋರವರ್ ಅವರು ಫಕೀರಪ್ಪ ಮೇತ್ರಿ ಅವರನ್ನು ನಿಂದಿಸಿದ್ದಾರೆ. `ದುಡ್ಡಿದ್ದರೆ ಮಾತ್ರ ಟೀ ಕುಡಿಯಲು ಬರಬೇಕು’ ಎಂದು ಹೇಳಿದ್ದಾರೆ. ಜೊತೆಗೆ, ಅಲ್ಲಿದ್ದ ರಾಡಿನಿಂದ ಹೊಡೆದಿದ್ದಾರೆ. ಈ ಬಗ್ಗೆ ಫಕೀರಪ್ಪ ಮೇತ್ರಿ ಅವರು ನವೆಂಬರ್ 1ರಂದು ಪೊಲೀಸ್ ದೂರು ನೀಡಿದ್ದಾರೆ.
`ದೂರು ನೀಡಿದರೂ ಪೊಲೀಸರು ವೆಂಕಟೇಶ್ ಅವರನ್ನು ಬಂಧಿಸಿಲ್ಲ’ ಎಂಬ ಕಾರಣಕ್ಕೆ ಫಕೀರಪ್ಪ ಮೇತ್ರಿ ಅವರು ಸಿಟ್ಟಾಗಿದ್ದಾರೆ. ಅದನ್ನು ಪ್ರಶ್ನಿಸಲು ಮತ್ತೆ ಅವರು ತಮ್ಮ ಮಗಳ ಜೊತೆ ಪೊಲೀಸ್ ಠಾಣೆಗೆ ಬಂದಿದ್ದಾರೆ. `ವೆಂಕಟೇಶನನ್ನು ನೀವು ಬಂಧಿಸುತ್ತಿಲ್ಲ. ಆತನಿಂದ ನನಗೆ ಹಣ ಕೊಡಿಸುತ್ತಿಲ್ಲ’ ಎಂದು ಪೊಲೀಸರ ಬಳಿ ವಾದ ಮಾಡಿದ್ದಾರೆ. `ಕ್ರಮ ಜರುಗಿಸದೇ ಇದ್ದರೆ ಮಗಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳುವೆ’ ಎಂದು ಬೆದರಿಸಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ತರುವ ರೀತಿ ಫಕೀರಪ್ಪ ಮೇತ್ರಿ ಅವರು ಮಾತನಾಡಿದ್ದು, ಆಗ ಪೊಲೀಸ್ ಸಿಬ್ಬಂದಿ ಮಹಮದ್ ಹನೀಫ್ ಅವರು ದೂರು ನೀಡುವಂತೆ ಸೂಚನೆ ನೀಡಿದ್ದಾರೆ. `ಕಾನೂನಿನ ಪ್ರಕಾರ ಕ್ರಮ ಜರುಗಿಸುತ್ತೇವೆ’ ಎಂದು ಭರವಸೆಯನ್ನು ನೀಡಿದ್ದಾರೆ.
ಆದರೆ, ಅದಕ್ಕೆ ಒಪ್ಪದ ಫಕೀರಪ್ಪ ಮೇತ್ರಿ ಅವರು ಪೊಲೀಸ್ ಠಾಣೆಯಿಂದ ತಮ್ಮ ಮಗಳನ್ನು ಹೊರಗೆ ಎಳೆದು ತಂದಿದ್ದಾರೆ. ಮಗಳ ಮೈಮೇಲೆ ಸೀಮೆಎಣ್ಣೆ ಸುರಿದು, ನಂತರ ತಾವು ಅದನ್ನು ಸುರಿದುಕೊಂಡಿದ್ದಾರೆ. ತಕ್ಷಣ ಇದನ್ನು ಗಮನಿಸಿದ ಪಿಸೈ ಕಿರಣ ಪಾಟೀಲ್ ಅವರು ಇನ್ನಿತರ ಪೊಲೀಸರ ಜೊತೆ ಸೇರಿ ಅವರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ನಂತರ ಫಕೀರಪ್ಪ ಅವರ ವರ್ತನೆ ಬಗ್ಗೆ ಕೋರ್ಟಿಗೆ ಮಾಹಿತಿ ನೀಡಿ, ಕೇಸು ಹಾಕಿದ್ದಾರೆ.