ಪ್ರೀತಿ ಮಾಡುವುದಾಗಿ ನಂಬಿಸಿ ಶಿಕ್ಷಕಿಯೊಬ್ಬರ ಜೊತೆ ಸಲುಗೆ ಬೆಳೆಸಿಕೊಂಡಿದ್ದ ಮುರುಡೇಶ್ವರದ ಆಂಟೋನಿ ಜೋಸೆಪ್ ಅವರು ಆ ಶಿಕ್ಷಕಿ ಜೊತೆ ಸರಸ-ಸಲ್ಲಾಪವಾಡಿದ ವಿಡಿಯೋ ವೈರಲ್ ಮಾಡಿದ್ದು, ಇದನ್ನು ಸಹಿಸದ ನ್ಯಾಯಾಲಯ ಅಂಟೋನಿ ಜೋಸೆಪ್ ಅವರಿಗೆ ಜೈಲು ಶಿಕ್ಷೆ ವಿಧಿಸಿದೆ. ಮಾಡಿದ ತಪ್ಪಿಗೆ ಆರು ತಿಂಗಳು ಜೈಲು ಹಾಗೂ 5 ಸಾವಿರ ರೂ ದಂಡ ಪಾವತಿಸಬೇಕು ಎಂದು ಭಟ್ಕಳದ ನ್ಯಾಯಾಧೀಶೆ ರೂಪಶ್ರೀ ಅವರು ಆದೇಶ ಹೊರಡಿಸಿದ್ದಾರೆ.
ಭಟ್ಕಳದ ತೆರ್ನಮಕ್ಕಿಯ ಜನತಾ ಕಾಲೋನಿಯ ಅಂತೋನ್ ಜೂಜೆ ಪರ್ತಾಡೋ (ಆಂಟೋನಿ ಜೋಸೆಪ್) ಅವರು ವಾಸವಾಗಿದ್ದರು. ಅದೇ ಭಾಗದ ಶಿಕ್ಷಕಿಯೊಬ್ಬರನ್ನು ಅವರು ಎಂಟು ವರ್ಷದಿಂದ ಪ್ರೀತಿಸುತ್ತಿದ್ದರು. ಆಂಟೋನಿ ಜೋಸೆಪ್ ಅವರ ಪ್ರೀತಿಯನ್ನು ಶಿಕ್ಷಕಿ ಮನ್ನಿಸಿದ್ದು, ಪ್ರೀತಿ-ಪ್ರೇಮ ಸುತ್ತಾಟದ ಅವಧಿಯಲ್ಲಿ ಅವರಿಬ್ಬರು ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಆದರೆ, ಆಂಟೋನಿ ಜೋಸೆಪ್ ಅವರು ಸರಸ-ಸಲ್ಲಾಪದ ವಿಡಿಯೋ ಮಾಡಿಕೊಂಡಿದ್ದರು. ಕ್ರಮೇಣ ಆಂಟೋನಿ ಜೋಸೆಪ್ ಅವರ ವರ್ತನೆ ಬದಲಾಯಿತು. ಅವರ ಕ್ರೂರ ಸ್ವಭಾವ ಗಮನಿಸಿದ ಶಿಕ್ಷಕಿ ಪ್ರೀತಿಯಿಂದ ದೂರವಾಗುವ ಪ್ರಯತ್ನ ಮಾಡಿದರು.
ಆಗ ಆಂಟೋನಿ ಜೋಸೆಪ್ ತಿರುಗಿಬಿದ್ದಿದ್ದು, ಶಿಕ್ಷಕಿಯನ್ನು ಹಿಂಬಾಲಿಸಲು ಶುರು ಮಾಡಿದರು. ಅತ್ಯಂತ ಕೆಟ್ಟದಾಗಿ ಸನ್ನೆ ಮಾಡುವುದು ಹಾಗೂ ಕೆಟ್ಟ ಭಾವನೆಯಿಂದ ನಡೆದುಕೊಳ್ಳುವುದನ್ನು ಮುಂದುವರೆಸಿದರು. ಶಿಕ್ಷಕಿ ಇದಕ್ಕೂ ತಲೆಕೆಡಿಸಿಕೊಳ್ಳದಿದ್ದಾಗ ಅವರ ಖಾಸಗಿ ಕ್ಷಣದ ಫೋಟೋವನ್ನು ಕುಟುಂಬದವರಿಗೆ ಕಳುಹಿಸಿದರು. ವಾಟ್ಸಪ್ ಗ್ರೂಪ್ ಒಂದನ್ನು ರಚಿಸಿ ಅದರಲ್ಲಿಯೂ ಆ ಫೋಟೋಗಳನ್ನು ಹಂಚಿಕೊAಡರು. `ನೀ ಬೇರೆಯವರನ್ನು ಮದುವೆ ಆದರೆ ಮದುವೆಯಾದ ಹುಡುಗನಿಗೂ ಇದನ್ನು ಕಳುಹಿಸುವೆ’ ಎಂದು ಬೆದರಿಸಿದರು. ಈ ಎಲ್ಲಾ ವಿದ್ಯಮಾನ 2023ರಲ್ಲಿ ನಡೆದಿದ್ದು, ಶಿಕ್ಷಕಿ ನ್ಯಾಯ ಕೋರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದರು.
ಮುರ್ಡೇಶ್ವರ ವೃತ್ತದ ಆಗಿನ ಸಿಪಿಐ ಸಂತೋಷ್ ಕಾಯ್ಕಿಣಿ ಅವರು ಸಮಗ್ರ ತನಿಖೆ ನಡೆಸಿ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದರು. ಬಳಿಕ ಆರೋಪಿಯ ವಿರುದ್ಧ ಭಟ್ಕಳ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಭಟ್ಕಳದ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ರೂಪಶ್ರೀ ಅವರು, ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆರು ತಿಂಗಳ ಜೈಲು ಶಿಕ್ಷೆ ಹಾಗೂ 5,000 ದಂಡ ವಿಧಿಸಿ ಆದೇಶಿಸಿದರು. ಈ ಪ್ರಕರಣದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕಿ ಪುಟ್ಟಲಕ್ಷ್ಮಿ ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು. ತನಿಖಾ ಸಹಾಯಕರಾಗಿ ಸುಬ್ರಹ್ಮಣ್ಯ, ಸಿದ್ದಪ್ಪ ಹಾಗೂ ನ್ಯಾಯಾಲಯದ ಕರ್ತವ್ಯದಲ್ಲಿ ವನಿತಾ ಅವರು ಸಹಕರಿಸಿದ್ದರು.
`ಮಹಿಳೆಯರಿಗೆ ಪೀಡಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸುತ್ತಿದ್ದು, ಸಂತ್ರಸ್ತರು ಧೈರ್ಯದಿಂದ ದೂರು ನೀಡಬೇಕು’ ಎಂದು ಪೊಲೀಸರು ಹೇಳಿದ್ದಾರೆ.