ಕಾರವಾರ-ಕೈಗಾ ರಾಜ್ಯ ಹೆದ್ದಾರಿಯಲ್ಲಿ 15 ಮೆಟ್ರಿಕ್ ಟನ್ ಲಾರಿಗಳ ಓಡಾಟಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಸದ್ಯ 30 ಮೆಟ್ರಿಕ್ ಟನ್ ಮೀರಿ ಸರಕು ಹೊತ್ತ ಲಾರಿಗಳು ಸಂಚಾರ ನಡೆಸಿವೆ. ಈ ಬಗ್ಗೆ ಕ್ರಮ ಜರುಗಿಸಬೇಕಾದ ಅಧಿಕಾರಿಗಳು ಡೀಸಿ ಆದೇಶಕ್ಕೆ ಬೆಲೆ ಕೊಡುತ್ತಿಲ್ಲ.
ಕಾರವಾರದ ಕೈಗಾದಲ್ಲಿ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದಕ್ಕಾಗಿ ಅಲ್ಲಿ ಭಾರೀ ಪ್ರಮಾಣದ ಸರಕು-ಸಾಮಗ್ರಿಗಳು ಅಗತ್ಯವಿದೆ. ಆದರೆ, ರಸ್ತೆ ಹಾಳಾದ ಕಾರಣ ಭಾರೀ ಪ್ರಮಾಣದ ಸರಕು-ಸಾಮಗ್ರಿ ವಾಹನ ಓಡಾಟವನ್ನು ಜಿಲ್ಲಾಡಳಿತ ನಿಷೇಧಿಸಿದ್ದು, ಕೈಗಾ ಅಣು ಘಟಕದವರ ಮನವಿ ಮೇರಗೆ 15 ಮೆಟ್ರಿಕ್ ಟನ್ ಸರಕು ಸಾಮಗ್ರಿ ವಾಹನ ಓಡಾಟಕ್ಕೆ ಅವಕಾಶ ನೀಡಿದೆ. ಜೊತೆಗೆ ಹದಗೆಟ್ಟ ರಸ್ತೆ ಸರಿಪಡಿಸುವ ಹೊಣೆಯನ್ನು ಅಣು ಘಟಕದವರಿಗೆವಹಿಸಿದೆ. ಈ ಎಲ್ಲಾ ಷರತ್ತು ಪಾಲಿಸುವುದಾಗಿ ಒಪ್ಪಿಯೇ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ಪಿಸಿಐಎಲ್) ಕೆಲಸ ಶುರು ಮಾಡಿದೆ.
ಹೆದ್ದಾರಿಯ ಕೇರವಡಿ-ಮಲ್ಲಾಪುರ ಭಾಗದ ಪುನರ್ನಿರ್ಮಾಣ ಮತ್ತು ವಿಸ್ತರಣಾ ಕಾಮಗಾರಿಯನ್ನು ಎನ್ಪಿಸಿಐಎಲ್ ಗುತ್ತಿಗೆ ನೀಡಿದ್ದು, ಕಾಮಗಾರಿ ಪ್ರಸ್ತುತ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿಗಳು ವಿಧಿಸಿರುವ ಷರತ್ತುಗಳಿಗೆ ಅನುಗುಣವಾಗಿ ವಾಹನಗಳ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಸಂಸ್ಥೆ ಕೈಗೊಳ್ಳುತ್ತಿದೆ. ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ವಾಹನಗಳಲ್ಲಿ ಪ್ರತಿ ಆಕ್ಸಲ್ಗೆ 15 ಮೆಟ್ರಿಕ್ ಟನ್ಗಳ ಮಿತಿಯನ್ನು ಮೀರದಂತೆ ಭಾರ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಹ ಸೂಚಿಸಲಾಗಿದೆ.
ಮುಂದಿನ ದಿನಗಳಲ್ಲಿ ರಸ್ತೆಗೆ ಮತ್ತೆ ದುರಸ್ತಿ ಅಗತ್ಯವಿದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಸದ್ಯ 15 ಮೆಟ್ರಿಕ್ ಟನ್ ಬಾರದ ಲಾರಿ ಸಂಚಾರಕ್ಕೆ ಮಾತ್ರ ಅವಕಾಶವಿದ್ದರೂ, ಅದರ ದುಪ್ಪಟ್ಟು ಬಾರದ ಸರಕು ಸಾಮಗ್ರಿ ಸರಬರಾಜಾಗುತ್ತಿದೆ. ವಿಧಿಸಲಾದ ಆ ಎಲ್ಲಾ ಷರತ್ತುಗಳನ್ನು ಅಲ್ಲಿನ ಅಧಿಕಾರಿಗಳು ಮರೆತಿದ್ದಾರೆ. ಅಧಿಕ ಬಾರ ಹೊತ್ತು ಅಪಾಯಕಾರಿ ರೀತಿ ಸಾಗುವ ಲಾರಿಗಳನ್ನು ಸಾರಿಗೆ ಅಧಿಕಾರಿಗಳು ತಡೆಯುತ್ತಿಲ್ಲ. ಪೊಲೀಸರು ಸಹ ಪ್ರಶ್ನಿಸುತ್ತಿಲ್ಲ.