ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಅಬ್ದುಲ್ ಅಲ್-ಸಯ್ಯದ್ ಅವರು ಹೊಸ ದಾಖಲೆ ಬರೆದಿದ್ದಾರೆ. ಮಿಚಿಗನ್ ರಾಜ್ಯದಿಂದ ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರು ರಿಪಬ್ಲಿಕನ್ ಪಕ್ಷದ ಮೈಕ್ ರೋಜರ್ಸ್ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.
ಆ ಮೂಲಕ ಅಮೆರಿಕದ ಇತಿಹಾಸದಲ್ಲೇ ಆಯ್ಕೆಯಾದ ಮೊದಲ ಮುಸ್ಲಿಂ ಸೆನೆಟರ್ ಎಂಬ ಹೆಗ್ಗಳಿಕೆಗೂ ಅಬ್ದುಲ್ ಅಲ್-ಸಯ್ಯದ್ ಅವರು ಪಾತ್ರರಾಗಿದ್ದಾರೆ. ಈ ಐತಿಹಾಸಿಕ ಜಯವನ್ನು ಅವರು ತಮ್ಮ ಪತ್ನಿ ಡಾ ಸಾರಾ ಜುಕಕು ಅವರೊಂದಿಗೆ ಸಂಭ್ರಮಿಸಿದ್ದಾರೆ. ಡಾ ಸಾರಾ ಜುಕಕು ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರಾಗಿದ್ದು, ಅಬ್ದುಲ್ ಅಲ್-ಸಯ್ಯದ್ ಹಾಗೂ ಡಾ ಸಾರಾ ಜುಕಕು ಅವರು ಭಾರತದ ಜೊತೆ ಹೊಂದಿದ ನಂಟು ಜಾಗತಿಕ ಮಟ್ಟದಲ್ಲಿ ಗಮನಸೆಳೆದಿದೆ.
ಅಬ್ದುಲ್ ಅಲ್-ಸಯ್ಯದ್ ಅವರ ಪತ್ನಿ ಡಾ ಸಾರಾ ಜುಕಕು ಅವರ ಕುಟುಂಬ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ ಅಮೆರಿಕಕ್ಕೆ ವಲಸೆ ಹೋದವರು. 2006ರ ಮೇ ತಿಂಗಳಿನಲ್ಲಿ ಮದುವೆಯಾಗಿದ್ದ ಅಬ್ದುಲ್ ಅಲ್-ಸಯ್ಯದ್ ಹಾಗೂ ಡಾ ಸಾರಾ ಜುಕಕು ಅವರಿಗೆ ಎಮ್ಮಲಿ ಮತ್ತು ಸೆರೀನ್ ಎಂಬ ಎರಡು ಹೆಣ್ಣು ಮಕ್ಕಳಿದ್ದಾರೆ. ಸಾರಾ ಅವರ ತಾತ ಜುಕಕು ಶಂಸುದ್ದೀನ್ ಅವರು ಹಳೆಯ ಮೈಸೂರು ರಾಜ್ಯದ ಆಗಿನ ಮುಖ್ಯಮಂತ್ರಿ ಬಿ ಡಿ ಜತ್ತಿ ಅವರ ಸಚಿವ ಸಂಪುಟದಲ್ಲಿ ಉಪ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಭಟ್ಕಳ ಪ್ರಾಂತ್ಯದ ಪ್ರಥಮ ವಕೀಲರೆಂದೂ ಅವರು ಗುರುತಿಸಿಕೊಂಡಿದ್ದರು.
ಸಾರಾ ಅವರ ತಂದೆ ಡಾ ತಯ್ಯಬ್ ಜುಕಕು ಅವರು ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದ್ದಾರೆ. ನಂತರ ಅವರು ಅಮೆರಿಕದಲ್ಲಿ ನೆಫ್ರಾಲಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು ಎರಡು ದಶಕಗಳಿಂದ ಭಾರತೀಯ ಕುಟುಂಬದೊoದಿಗೆ ನಂಟು ಹೊಂದಿರುವ ಅಬ್ದುಲ್ ಅಲ್-ಸಯ್ಯದ್ ಅವರು `ನಾನು ಅರಬ್ ಮೂಲದವನಿಗಿಂತ ಹೆಚ್ಚು ಭಾರತೀಯನಾಗಿ ಬಿಟ್ಟಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.