`ನೀರಿನ ಬಾಟಲಿ ದರ ಹೆಚ್ಚಾದರೆ ಒಬ್ಬರೂ ಮಾತನಾಡುವುದಿಲ್ಲ. ಆದರೆ, ಹಾಲಿನ ಬೆಲೆ ಏರಿಕೆಯಾದಾಗ ಮಾತ್ರ ವಿರೋಧ ಹೆಚ್ಚಾಗುತ್ತದೆ’ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಹೇಳಿದ್ದಾರೆ. ಇದಕ್ಕೆ `ನೀರು ಹಾಗೂ ಹಾಲಿನ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಪ್ರತಿಕ್ರಿಯಿಸಿದ್ದಾರೆ.
`ನೀರಿನ ಬಾಟಲಿ ಮತ್ತು ಹಾಲು ಎರಡನ್ನೂ ಒಂದೇ ರೀತಿಯಲ್ಲಿ ಹೋಲಿಕೆ ಮಾಡುವುದು ಸಮಂಜಸವಲ್ಲ. ಇವೆರಡರ ಸ್ವರೂಪ, ಉತ್ಪಾದನೆ, ಬಳಕೆ ಹಾಗೂ ಜನಸಾಮಾನ್ಯರ ಜೀವನದಲ್ಲಿ ಅವುಗಳ ಅನಿವಾರ್ಯತೆ ಸಂಪೂರ್ಣ ಭಿನ್ನವಾಗಿದೆ’ ಎಂದು ಮಾಧವ ನಾಯಕ ಅವರು ಹೇಳಿದ್ದಾರೆ. `ನೀರಿನ ಬಾಟಲಿ ಖರೀದಿಸುವುದು ಬಹುತೇಕ ಸಂದರ್ಭಗಳಲ್ಲಿ ಐಚ್ಛಿಕ ಆಯ್ಕೆಯಾಗಿದೆ. ಹಣವಂತರು, ಪ್ರವಾಸಿಗರು, ಹೋಟೆಲ್ಗಳಿಗೆ ತೆರಳುವವರು ಹಾಗೂ ಅನುಕೂಲಸ್ಥರು ಬಾಟಲಿ ನೀರನ್ನು ಖರೀದಿಸುತ್ತಾರೆ. ಆದರೆ ಬಾಟಲಿ ನೀರಿಗೆ ಪರ್ಯಾಯವಾಗಿ ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಬಾವಿ, ಕೊಳವೆಬಾವಿ, ಕೆರೆ ಹಾಗೂ ಇತರ ಜಲಮೂಲಗಳಿಂದ ನೀರು ಪಡೆಯುವ ವ್ಯವಸ್ಥೆಯೂ ಇದೆ. ಮಳೆಯ ಮೂಲಕವೂ ನೀರಿನ ಮೂಲಗಳು ಮರುಪೂರಣಗೊಳ್ಳುತ್ತವೆ. ಆದರೆ ಹಾಲಿಗೆ ಇಂತಹ ಪರ್ಯಾಯ ವ್ಯವಸ್ಥೆಯಿಲ್ಲ ಎನ್ನುವುದನ್ನು ಮುಖ್ಯಮಂತ್ರಿಗಳು ಅರಿಯಬೇಕು’ ಎಂದು ಮಾಧವ ನಾಯಕ ಅವರು ಹೇಳಿದ್ದಾರೆ.
`ಹಾಲು ಮಳೆಯಿಂದ ಸುರಿಯುವುದಿಲ್ಲ. ಹೊಲ-ಗದ್ದೆಗಳಲ್ಲಿ ಹರಿದು ಬರುವುದಿಲ್ಲ. ರೈತರು ಹಸು ಮತ್ತು ಎಮ್ಮೆಗಳನ್ನು ಸಾಕಿ ಅವುಗಳಿಗೆ ಮೇವು, ಪಶು ಆಹಾರ ಒದಗಿಸಿ, ಪಶುವೈದ್ಯಕೀಯ ವೆಚ್ಚ ಭರಿಸಿ, ಹಗಲಿರುಳು ಶ್ರಮಿಸಿದಾಗ ಮಾತ್ರ ಹಾಲು ಉತ್ಪಾದನೆಯಾಗುತ್ತದೆ. ಹಾಲಿನ ಉತ್ಪಾದನೆಯ ಹಿಂದೆ ರೈತರ ಬೆವರಿದೆ. ಹೀಗಾಗಿ ಹಾಲಿನ ಬೆಲೆ ನಿಗದಿಪಡಿಸುವಾಗ ರೈತರ ಹಿತಾಸಕ್ತಿ ಹಾಗೂ ಗ್ರಾಹಕರ ಆರ್ಥಿಕ ಪರಿಸ್ಥಿತಿ ಎರಡನ್ನೂ ಗಮನಿಸಬೇಕಾಗಿದೆ’ ಎಂದವರು ಸಲಹೆ ನೀಡಿದ್ದಾರೆ. `ಇಂದಿನ ದಿನಗಳಲ್ಲಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಸಾಮಾನ್ಯ ಕುಟುಂಬಗಳ ಮಾಸಿಕ ಬಜೆಟ್ಗೆ ದೊಡ್ಡ ಹೊರೆಯಾಗಿದೆ. ಒಂದು ಕಾಲದಲ್ಲಿ ದಿನನಿತ್ಯದ ಆಹಾರದ ಅವಿಭಾಜ್ಯ ಭಾಗವಾಗಿದ್ದ ಹಾಲು, ಮೊಸರು ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆಗೆ ಪೈಪೋಟಿ ನೀಡುವಂತೆ ದುಬಾರಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿಶೇಷವಾಗಿ ಬಡವರು, ಮಧ್ಯಮ ವರ್ಗದ ಕುಟುಂಬಗಳು, ಮಕ್ಕಳು ಮತ್ತು ವಯೋವೃದ್ಧರಿಗೆ ಹಾಲು ಅತ್ಯಗತ್ಯವಾಗಿದೆ. ಬೆಲೆ ಏರಿಕೆಯಾದರೂ ಅನಿವಾರ್ಯವಾಗಿ ಖರೀದಿಸಲೇಬೇಕಾದ ಪರಿಸ್ಥಿತಿ ಇದೆ’ ಎಂದವರು ವಿವರಿಸಿದ್ದಾರೆ.
`ನೀರಿನ ಬಾಟಲಿ ಬೆಲೆ ಹೆಚ್ಚಾದರೆ ಅದನ್ನು ಖರೀದಿಸದೆ ಬೇರೆ ವ್ಯವಸ್ಥೆ ಮಾಡಿಕೊಳ್ಳಬಹುದು. ಆದರೆ ಮಕ್ಕಳಿಗೆ, ವಯೋವೃದ್ಧರಿಗೆ ಹಾಗೂ ಕುಟುಂಬದ ದೈನಂದಿನ ಪೌಷ್ಟಿಕ ಆಹಾರಕ್ಕೆ ಅಗತ್ಯವಿರುವ ಹಾಲನ್ನು ಖರೀದಿಸದೆ ಇರಲು ಸಾಧ್ಯವೇ?’ ಎಂದು ಮಾಧವ ನಾಯಕ ಅವರು ಪ್ರಶ್ನಿಸಿದ್ದಾರೆ. `ಸರ್ಕಾರವು ಹಾಲಿನ ದರ ಏರಿಕೆ ಮಾಡುವಾಗ ರೈತರಿಗೆ ಸಮರ್ಪಕ ಪ್ರೋತ್ಸಾಹಧನ ಮತ್ತು ನ್ಯಾಯಯುತ ಬೆಲೆ ದೊರೆಯುವಂತೆ ನೋಡಿಕೊಳ್ಳಬೇಕು. ಅದೇ ಸಂದರ್ಭದಲ್ಲಿ ಗ್ರಾಹಕರ ಮೇಲೆ ಅನಗತ್ಯ ಆರ್ಥಿಕ ಹೊರೆ ಬೀಳದಂತೆ ಕ್ರಮ ಕೈಗೊಳ್ಳಬೇಕು. ಮೊಸರಿನ ಬೆಲೆ ಕಡಿಮೆ ಮಾಡುವ ಸೂಚನೆ ನೀಡುವುದಕ್ಕಿಂತ ಹಾಲು ಉತ್ಪಾದಕರಿಗೆ ನೀಡುವ ದರ, ಗ್ರಾಹಕರಿಗೆ ವಿಧಿಸುವ ದರ ಮತ್ತು ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಯ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.
`ನೀರಿನ ಬಾಟಲಿ ಬೆಲೆ ಏರಿಕೆಯನ್ನು ಉದಾಹರಣೆಯಾಗಿ ನೀಡಿ ಹಾಲಿನ ಬೆಲೆ ಏರಿಕೆಯನ್ನು ಸಮರ್ಥಿಸುವುದು ಜನಸಾಮಾನ್ಯರ ಸಮಸ್ಯೆಗೆ ಪರಿಹಾರವಲ್ಲ. ಹಾಲು ರೈತನ ಬದುಕು ಮತ್ತು ಸಾಮಾನ್ಯ ಕುಟುಂಬದ ಅವಶ್ಯಕತೆ ಎರಡೂ ಆಗಿದೆ. ಆದ್ದರಿಂದ ಹಾಲಿನ ಬೆಲೆ ವಿಚಾರದಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು’ ಎಂದು ಜನಶಕ್ತಿ ವೇದಿಕೆಯ ಜಿಲ್ಲಾಧ್ಯಕ್ಷ ಮಾಧವ ಬಿ ನಾಯಕ ಅವರು ಆಗ್ರಹಿಸಿದ್ದಾರೆ.